ನವದೆಹಲಿ: ಕೆಲವು ದಿನಗಳಿಂದ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದ್ದ ಟಿ20 ವಿಶ್ವಕಪ್ಗೆ(T20 World Cup 2024) ಟೀಮ್ ಇಂಡಿಯಾ(Team India) ಪ್ರಕಟಗೊಳ್ಳುವ ವಿಚಾರದಲ್ಲಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್(Ajit Agarkar) ಮತ್ತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohit Sharma) ಅವರು ದೆಹಲಿಯಲ್ಲಿ ಇಂದು ಸಭೆ ಸೇರಿ ಆಟಗಾರರ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯದ ಮಾಹಿತಿ ಪ್ರಕಾರ ಆರಂಭಿಕ ಆಟಗಾರನ ಸ್ಥಾನ ಮತ್ತು ವಿಕೆಟ್ ಕೀಪರ್ ಆಯ್ಕೆ ಹಾಗೂ ಆಲ್ ರೌಂಡರ್ ಕುರಿತು ಹೆಚ್ಚಿನ ಚರ್ಚೆಗಳಾಗಲಿದೆ ಎಂದು ತಿಳಿದುಬಂದಿದೆ. ಹಾರ್ದಿಕ್ ಪಾಂಡ್ಯ ಅವರು ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಅವರಿಗೆ ಅವಕಾಶ ಎನ್ನಲಾಗಿದೆ. ಮೇ 1ರಂದು ತಂಡ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಮೇ 1ರಂದು ಪ್ರಕಟಿಸಲಿದೆ ಎನ್ನಲಾಗಿದೆ. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.
The T20 World Cup 2024 selection meeting between captain Rohit Sharma and selector Ajit Agarkar will take place today. pic.twitter.com/U2zgO2pctK
— Vishal. (@SPORTYVISHAL) April 28, 2024
ಚಹಲ್ಗೆ ಅವಕಾಶ ಅನುಮಾನ
ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ, ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೋಚಿಂಗ್ ಸ್ಟಾಫ್ ನ ಪ್ರಭಾವಿ ಸದಸ್ಯರಿಗೆ ಚಾಹಲ್ ಆದ್ಯತೆಯ ಆಯ್ಕೆಯಾಗಿಲ್ಲ ಎಂದು ವರದಿಯಾಗಿದೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದು, ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಅಥವಾ ರವಿ ಬಿಷ್ಣೋಯಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದ್ಯಕ್ಕೆ ಆರಂಭಿಕ ಸ್ಥಾನಕ್ಕೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮ, ಆಲ್ರೌಂಡರ್ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ. ರೋಹಿತ್ ಶರ್ಮ ಜತೆ ಕೊಹ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.
ರಿಷಭ್ ಪಂತ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, 2ನೇ ಕೀಪರ್ ಆಯ್ಕೆಗೆ ಒಟ್ಟು 4 ಮಂದಿ ಆಟಗಾರರ ನಡುವೆ ತೀವ್ರ ಸ್ಪರ್ಧೆ ಇದೆ. ರಾಹುಲ್, ಜಿತೇಶ್ ಶರ್ಮ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇವರಲ್ಲಿ ಒಬ್ಬರು ಆಯ್ಕೆಯಾಗಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಮೀಸಲು ಬೌಲರ್ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು. ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗುವುದು ಬಹುತೇಕ ಡೌಟ್ ಎನ್ನಲಾಗಿದೆ.
ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್ 9 ರಂದು ಪಾಕ್ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.