ಮುಂಬಯಿ: ಮುಂದಿನ ತಿಂಗಳು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ಗಾಗಿ(T20 World Cup 2024) ಟೀಮ್ ಇಂಡಿಯಾದ(team india) ಮೊದಲ ಬ್ಯಾಚ್ ಮೇ 25ರಂದು ನ್ಯೂಯಾರ್ಕ್(New York)ಗೆ ಪ್ರಯಾಣಿಸಲಿದೆ. ಈ ಬ್ಯಾಚ್ನಲ್ಲಿ ನಾಯಕ ರೋಹಿತ್ ಶರ್ಮ(Rohit Sharma), ಉಪನಾಯಕ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಸೇರಿ ಐಪಿಎಲ್ ಪ್ಲೇ ಆಫ್ನಿಂದ ಹೊರಬಿದ್ದ ತಂಡದ ಆಟಗಾರರು ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ಮೇ 26 ಐಪಿಎಲ್ ಫೈನಲ್ ಬಳಿಕ ವಿಮಾನ ಏರಲಿದ್ದಾರೆ. ಒಟ್ಟು 2 ಬ್ಯಾಚ್ಗಳಾಗಿ ಭಾರತೀಯ ಆಟಗಾರರು ಪ್ರಯಾಣಿಸಲಿದ್ದಾರೆ.
ಮೂಲ ವೇಳಾಪಟ್ಟಿಯ ಪ್ರಕಾರ ಭಾರತ ತಂಡದ ಆಟಗಾರರು ಮೇ 21ರಂದು ನ್ಯೂಯಾರ್ಕ್ಗೆ ತೆರಳಬೇಕಿತ್ತು. ಆದರೆ ಐಪಿಎಲ್ ಟೂರ್ನಿಯಿಂದಾಗಿ ಇದು ಸಾಧ್ಯವಾಗಲಿಲ್ಲ. ಇದು ಮಾತ್ರವಲ್ಲದೆ ಭಾರತ ಏಕೈಕ ಅಭ್ಯಾಸ ಪಂದ್ಯ ಮಾತ್ರ ಆಡಲಿದೆ. ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ. ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಭಾರತ ಈ ಪಂದ್ಯವನ್ನು ಆಡಲಿದೆ. ಅಭ್ಯಾಸ ಪಂದ್ಯಗಳು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ.
ಇದನ್ನೂ ಓದಿ T20 World Cup 2024: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತದ ಎದುರಾಳಿ ಯಾರು?
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಜೂನ್ 5 | ಐರ್ಲೆಂಡ್ | ನ್ಯೂಯಾರ್ಕ್ |
ಜೂನ್ 9 | ಪಾಕಿಸ್ತಾನ | ನ್ಯೂಯಾರ್ಕ್ |
ಜೂನ್ 12 | ಅಮೆರಿಕ | ನ್ಯೂಯಾರ್ಕ್ |
ಜೂನ್ 15 | ಕೆನಡಾ | ಫ್ಲೋರಿಡಾ |