ಮುಂಬಯಿ: ಟಿ20 ವಿಶ್ವಕಪ್ ಟೂರ್ನಿಗೆ(T20 World Cup 2024) ಭಾರತ ತಂಡ ಈಗಾಗಲೇ ಪ್ರಕಟಗೊಂಡಿದೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನು ಆಡಿದರೆ ಉತ್ತಮ ಎಂದು ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್(Yuvraj Singh) ಕೂಡ ಯಾರನ್ನು ಆಡಿಸಿದರೆ ಉತ್ತಮ ಎಂದು ಹೇಳಿದ್ದಾರೆ.
ಐಸಿಸಿ ಸಂದರ್ಶವೊಂದರಲ್ಲಿ ಮಾತನಾಡಿದ ಯುವರಾಜ್ ಸಿಂಗ್, “ನಾನು ಸಂಜು ಸ್ಯಾಮ್ಸನ್‌ಗಿಂತ(sanju samson) ರಿಷಭ್ ಪಂತ್(Rishabh Pant) ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಎಡಗೈ ಆಟಗಾರ, ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲುವ ಬೃಹತ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಹಿಂದೆಯೂ ಕೂಡ ಭಾರತಕ್ಕೆ ಸ್ಮರಣೀಯ ಇನಿಂಗ್ಸ್ ಆಡಿ ಗೆಲುವು ತಂದುಕೊಟ್ಟಿದ್ದಾರೆ. ಟಿ20 ವಿಶ್ವಕಪ್ನಲ್ಲಿಯೂ ಅವರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರುವ ವಿಶ್ವಾಸವಿದೆ” ಎಂದು ಹೇಳಿದರು.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಭ್ ಪಂತ್ ಅವರು 14 ತಿಂಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಈ ಬಾರಿಯ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡಿದ್ದರು. ಪಂತ್ ದೀರ್ಘಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದರೂ ಕೂಡ ಅವರ ಪ್ರದರ್ಶನದಲ್ಲಿ ಯಾವುದೇ ವ್ಯತ್ಯಾಸ ಮಾತ್ರ ಕಂಡುಬಂದಿರಲಿಲ್ಲ. ಹಳೆಯ ಫಾರ್ಮ್ನಂತೆ ಪ್ರದರ್ಶನ ತೋರಿದ್ದರು. ಹೀಗಾಗಿ ಯುವರಾಜ್ ಕೂಡ ಪಂತ್ರನ್ನು ಟಿ20ಯಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.