ದುಬೈ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ(T20 World Cup 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಜೂನ್ 1ರಿಂದ ಆರಂಭಗೊಂಡು ಜೂನ್ 29ರ ತನಕ ಸಾಗಲಿದೆ. ಇದೀಗ ಅಭ್ಯಾಸ ಪಂದ್ಯಗಳ(warm up matches schedule) ವೇಳಾಪಟ್ಟಿ ಐಸಿಸಿ ಪ್ರಕಟಿಸಿದ್ದು, ಭಾರತ ಕೇವಲ ಒಂದು ಪಂದ್ಯ ಮಾತ್ರ ಆಡಲಿದೆ.
ಕೆಲವು ದಿನಗಳ ಹಿಂದೆಯೇ ಭಾರತ ತಂಡ ಕೇವಲ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದೆ ಎಂದು ಕ್ರಿಕ್ಬಜ್ ವರದಿ ಮಾಡಿತ್ತು. ಐಪಿಎಲ್ ಟೂರ್ನಿ ಮೇ 26ಕ್ಕೆ ಮುಕ್ತಾಯ ಕಾಣಲಿದೆ. ಹೀಗಾಗಿ ಆಟಗಾರರಿಗೆ ಮುಂಚಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಭಾರತೀಯ ಆಟಗಾರರು ವ್ಯಾಪಕ ಪ್ರಯಾಣ ಮತ್ತು ಐಪಿಎಲ್ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದ್ದಾರೆ ಎಂದು ಕ್ರಿಕ್ಬಜ್ ತಿಳಿಸಿತ್ತು. ಇದೀಗ ಈ ವರದಿ ನಿಜವಾಗಿದೆ. ಭಾರತ ಕೇವಲ ಒಂದು ಪಂದ್ಯ ಮಾತ್ರ ಆಡಲಿದೆ.
ಅಭ್ಯಾಸ ಪಂದ್ಯಗಳು ಮೇ 27ರಿಂದ ಜೂನ್ 1ರವರೆಗೆ ನಡೆಯಲಿದೆ. ಭಾರತ ಮಾತ್ರ ಏಕೈಕ ಪಂದ್ಯ ಆಡಲಿದ್ದು, ಉಳಿದ ತಂಡಗಳು ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ. ಆದರೆ ಪಂದ್ಯದ ತಾಣ ಎಲ್ಲಿ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಮೂಲಗಲ ಪ್ರಕಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ.
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಉಚಿತ ಪ್ರಸಾರ
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಡಿಸ್ನಿ + ಹಾಟ್‌ಸ್ಟಾರ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಟೂರ್ನಿಯನ್ನು ಕೂಡ ಡಿಸ್ನಿ + ಹಾಟ್‌ಸ್ಟಾರ್, ಮೊಬೈಲ್ ಬಳಕೆ ದಾರರಿಗೆ ಉಚಿತ ವೀಕ್ಷಣೆಯನ್ನು ನೀಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಇದೇ ನಿಲುವನ್ನು ಮುಂದುವರಿಸಿದೆ.