Site icon Vistara News

T20 World Cup 2024: ವಿಂಡೀಸ್​ಗೆ ಆಘಾತ; ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಕಿಂಗ್

T20 World Cup 2024: Side strain rules King out of T20 World Cup

ಬಾರ್ಬಡೋಸ್​: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಸೆಮಿಫೈನಲ್​ ಬಾಗಿಲಿಗೆ ಬಂದು ನಿಂತಿರುವ ವಿಂಡೀಸ್​ಗೆ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್​ ಹಾಗೂ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್(Brandon King) ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಹತ್ವದ ಹಂತದಲ್ಲಿ ಅವರ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಟೂರ್ನಿಯಿಂದ ಹೊರ ಬಿದ್ದಿರುವ ಕಿಂಗ್​ ಸ್ಥಾನಕ್ಕೆ ಬದಲಿ ಆಟಗಾರನಾಗಿ ಎಡಗೈ ಬ್ಯಾಟರ್​ ಕೈಲ್ ಮೇಯರ್ಸ್(Kyle Mayers) ಅವರನ್ನು ಆಯ್ಕೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮೋದನೆ ನೀಡಿದೆ. ಇಂಗ್ಲೆಂಡ್​ ವಿರುದ್ಧದ ಮೊದಲ ಸೂಪರ್​-8 ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸುವ ವೇಳೆ ಕಿಂಗ್​ ಜಾರಿ ಬಿದ್ದು ಕಾಲಿನ ಗಾಯಕ್ಕೆ ತುತ್ತಾಗಿ ಬಳಿಕ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಅವರ ಗಾಯದ ಪ್ರಮಾಣ ಗಂಭೀರ ಸ್ವರೂಪದಿಂದ ಕೂಡಿದ್ದು ಹಲವು ತಿಂಗಳ ವಿಶ್ರಾಂತಿ ಬೇಕೆಂದು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರ ಸ್ಥಾನಕ್ಕೆ ಆಯ್ಕೆಯಾದ ಕೈಲ್​ ಮೇಯರ್ಸ್​ ಕೂಡ ಆರಂಭಿಕ ಆಟಗಾರನಾಗಿದ್ದಾರೆ. ಕಳೆದ ವರ್ಷ ಐಪಿಎಲ್​ ಟೂರ್ನಿಯಲ್ಲಿ ವಿಸ್ಫೊಟಕ ಬ್ಯಾಟಿಂಗ್​ ಮೂಲಕ ಗಮನ ಸೆಳೆದಿದ್ದರು.

ಇದನ್ನೂ ಓದಿ IND vs BAN: ಕೊಹ್ಲಿ ಬ್ಯಾಟಿಂಗ್​ ಬಗ್ಗೆ ಸ್ವತಃ ಬೇಸರ ವ್ಯಕ್ತಪಡಿಸಿದ ಬ್ಯಾಟಿಂಗ್​ ಕೋಚ್​

ಬ್ರಾಂಡನ್ ಕಿಂಗ್ ಅವರು ಅಲಭ್ಯರಾದ ಕಾರಣ ಇಂದು ನಡೆದ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಶೈ ಹೋಪ್​ ಅವರು ಆಡುವ ಅವಕಾಶ ಪಡೆದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಹೋಪ್​, ಬರೋಬ್ಬರಿ 8 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ ಅಜೇಯ 82 ಚಚ್ಚಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವೆಸ್ಟ್​ ಇಂಡೀಸ್​ ಸೂಪರ್​-8 ಹಂತದಲ್ಲಿ ಸದ್ಯ 2 ಪಂದ್ಯ ಆಡಿ ತಲಾ ಒಂದು ಜಯ ಮತ್ತು ಸೋಲು ಕಂಡು ‘ಬಿ’ ಗ್ರೂಪ್​ನ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿದೆ. ಇಂಗ್ಲೆಂಡ್​ ಕೂಡ ಒಂದು ಗೆಲುವು ಮತ್ತು ಒಂದು ಸೋಲು ಕಂಡು ಮೂರನೇ ಸ್ಥಾನಿಯಾಗಿದೆ. ವಿಂಡೀಸ್​ ಅಂತಿಮ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಒಂದೊಮ್ಮೆ ಈ ಪಂದ್ಯ ಸೋತು, ಇಂಗ್ಲೆಂಡ್​ ಅಂತಿಮ ಪಂದ್ಯದಲ್ಲಿ ಗೆದ್ದರೆ ವಿಂಡೀಸ್​ ಟೂರ್ನಿಯಿಂದ ಹೊರಬೀಳಲಿದೆ. ಸೆಮಿ ಫೈನಲ್​ ಪ್ರವೇಶಿಸಬೇಕಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲೇ ಬೇಕು.

ವಿಂಡೀಸ್​ ಸೆಮಿ ಆಸೆ ಜೀವಂತ

ಇಲ್ಲಿನ ಕೆನ್ಸಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಮೊದಲು ಬೌಲಿಂಗ್‌ ಆಯ್ದುಕೊಂಡಿತು. ಆಯ್ಕೆಗೆ ತಕ್ಕ ಬೌಲಿಂಗ್‌ ಪ್ರದಶನ ತೋರುವ ಮೂಲಕ ಅಮೆರಿಕವನ್ನು ಕೇವಲ 128 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ಈ ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್‌ 10.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ನಷ್ಟಕ್ಕೆ 130 ರನ್‌ ಬಾರಿಸಿ ಭಜರಿ ಗೆಲುವು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ವಿಂಡೀಸ್​ ಸೆಮಿ ಆಸೆಯನ್ನು ಜೀವಂತವಾಗಿರಿಸಿದೆ.

Exit mobile version