ನ್ಯೂಯಾರ್ಕ್: ಟಿ20 ವಿಶ್ವಕಪ್(T20 World Cup 2024) ಆಡಲು ನ್ಯೂಯಾರ್ಕ್‌ನಲ್ಲಿ(New York) ಬೀಡು ಬಿಟ್ಟಿರುವ ಟೀಮ್ ಇಂಡಿಯಾ(Team India) ಆಟಗಾರರಿಗೆ ಸರಿಯಾದ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಎಂದು ತಂಡದ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಜತೆಗೆ ಅಭ್ಯಾಸ ನಡೆಸಲು ಸರಿಯಾದ ಸೌಲಭ್ಯವಿಲ್ಲ ಎಂದು ತಗಾದೆ ಎತ್ತಿದೆ.
ಕಳೆದ ಮೂರು ದಿನಗಳಿಂದ ಟೀಮ್ ಇಂಡಿಯಾದ ಆಟಗಾರರು ನ್ಯೂಯಾರ್ಕ್‌ನಲ್ಲಿ ಅಭ್ಯಾಸ ನಡೆಸುತ್ತಿದೆ. ಆಟಗಾರರು ಇಂದು ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಆದರೆ ಇಲ್ಲಿ ಅಭ್ಯಾಸ ನಡೆಸಲು ಉನ್ನತ ಸೌಲಭ್ಯಗಳಿಲ್ಲ ಎಂದು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ನ್ಯೂಸ್ 18 ವರದಿಯ ಪ್ರಕಾರ ಭಾರತ ತಂಡದ ಆಟಗಾರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ವಿಚಾರಗಳನ್ನು ಬಿಸಿಸಿಐ ಆಯೋಜಕ ಐಸಿಸಿ ಗಮನಕ್ಕೆ ತಂದಿದೆ ಎಂದು ವರದಿಯಾಗಿದೆ.
ನಾಯಕ ರೋಹಿತ್ ಶರ್ಮಾ, ಶುಭಮನ್ ಗಿಲ್, ಉಪನಾಯಕ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಮೊಹಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಅರ್ಶ್‌ದೀಪ್ ಸಿಂಗ್, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಅಮೆರಿಕದ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಬುಧವಾರ ಮತ್ತು ಗುರುವಾರ ಆಟಗಾರರು ಕೇವಲ ಜಾಗಿಂಗ್ ನಡೆಸಿ, ಫುಟ್ಬಾಲ್ ಆಡಿದ್ದರು.
ಭಾರತ ನಾಳೆ(ಶನಿವಾರ) ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನಾಡಲಿದೆ. ವ್ಯಾಪಕ ಪ್ರಯಾಣ ಮತ್ತು ಐಪಿಎಲ್ನಿಂದ ದಣಿದಿರುವ ಕಾರಣ ಕೇವಲ ಒಂದು ಅಭ್ಯಾಸ ಪಂದ್ಯಕ್ಕೆ ಮೊರೆ ಹೋಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
ಉಚಿತ ಪ್ರಸಾರ
ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಡಿಸ್ನಿ + ಹಾಟ್‌ಸ್ಟಾರ್ ಈಗಾಗಲೇ ಘೋಷಿಸಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ ಟೂರ್ನಿಯನ್ನು ಕೂಡ ಡಿಸ್ನಿ + ಹಾಟ್‌ಸ್ಟಾರ್, ಮೊಬೈಲ್ ಬಳಕೆ ದಾರರಿಗೆ ಉಚಿತ ವೀಕ್ಷಣೆಯನ್ನು ನೀಡಿತ್ತು. ಇದೀಗ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಇದೇ ನಿಲುವನ್ನು ಮುಂದುವರಿಸಿದೆ.