Site icon Vistara News

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಲು ಸಿದ್ಧರಾದ ಟೀಮ್​ ಇಂಡಿಯಾದ ಇಬ್ಬರು ಆಟಗಾರರು​

T20 World Cup 2024

T20 World Cup 2024: Two Indian Stars May Return Home Midway From T20 World Cup Before Super 8 Stage

ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡವು ಈಗಾಗಲೇ 2024 ರ ಟಿ20 ವಿಶ್ವಕಪ್‌(T20 World Cup 2024) ಟೂರ್ನಿಯಲ್ಲಿ ಸೂಪರ್ 8 ಹಂತಕೇರಿದೆ. ಸೂಪರ್ 8 ಮತ್ತು ನಾಕೌಟ್ ಹಂತಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳುವ ಮೊದಲು ಭಾರತವು ಅಮೆರಿಕದಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ಶುಭಮನ್​ ಗಿಲ್(Shubman Gill)​ ಮತ್ತು ಅವೇಶ್​ ಖಾನ್(Avesh Khan)​ ತವರಿಗೆ ಮರಳಲಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಜೂನ್​ 15ರಂದು ಉಭಯ ಆಟಗಾರರು ಭಾರತಕ್ಕೆ ವಾಪಸ್‌ ಆಗಲಿದ್ದಾರೆ ಎಂದು ತಿಳಿಸಿದೆ.

ಶುಭಮನ್ ಗಿಲ್ ಮತ್ತು ಅವೇಶ್ ಖಾನ್ ತಂಡದಲ್ಲಿ ಪ್ರಯಾಣ ಮೀಸಲು ಭಾಗವಾಗಿ ಸ್ಥಾನ ಪಡೆದಿದ್ದರು. ಇವರ ಜತೆ ಸ್ಥಾನ ಪಡೆದಿದ್ದ ರಿಂಕು ಸಿಂಗ್(Rinku Singh) ಮತ್ತು ಖಲೀಲ್ ಅಹ್ಮದ್(Khaleel Ahmed) ತಂಡದ ಜತೆಗೆ ಇರಲಿದ್ದಾರೆ ಎನ್ನಲಾಗಿದೆ. ಗಿಲ್​ ಮತ್ತು ಅವೇಶ್​ ತವರಿಗೆ ಮರಳಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಉಭಯ ಆಟಗಾರರು ತಂಡದೊಂದಿಗೆ ಇದ್ದರೂ ಕೂಡ ಇವರಿಗೆ ಆಡುವ ಅವಕಾಶವಿಲ್ಲ. ಏಕೆಂದರೆ ಇವರು ಪ್ರಧಾನ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿಲ್ಲ.

ಭಾರತ ತನ್ನ ಕೊನೆಯ ಲೀಗ್​ ಪಂದ್ಯವನ್ನು ಜೂನ್​ 15ರಂದು ಕೆನಡಾ ವಿರುದ್ಧ ಆಡಲಿದೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಈ ಪಂದ್ಯಕ್ಕೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಪಂದ್ಯ ರದ್ದಾದರೂ ಕೂಡ ಭಾರತಕ್ಕೆ ಯಾವುದೇ ನಷ್ಟ ಸಂಭವಿಸದು. ಏಕೆಂದರೆ ಭಾರತ ಈಗಾಗಲೇ ಸೂಪರ್​-8 ಪ್ರವೇಶ ಪಡೆದಾಗಿದೆ. ಹೀಗಾಗಿ ಈ ಪಂದ್ಯ ಭಾರತದ ಪಾಲಿಗೆ ಔಪಚಾರಿಕ ಪಂದ್ಯವಿದ್ದಂತೆ.

ಇದನ್ನೂ ಓದಿ PNG vs AFG: ಆಫ್ಘಾನ್​ಗೆ ಗೆಲುವು; ಟಿ20 ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲ್ಯಾಂಡ್​

ನ್ಯೂಯಾರ್ಕ್‌ ಪಿಚ್‌ನಲ್ಲಿ ಆಡುವುದು ಸುಲಭವಲ್ಲ: ರೋಹಿತ್​


ಸತತ ಮೂರು ಗೆಲುವು ಸಾಧಿಸಿ ಸೂಪರ್​-8 ಪ್ರವೇಶ ಪಡೆದಿದ್ದರೂ ಕೂಡ ಟೀಮ್​ ಇಂಡಿಯಾದ(Team India) ನಾಯಕ ರೋಹಿತ್​ ಶರ್ಮ(Rohit Sharma) ಅವರು ನ್ಯೂಯಾರ್ಕ್​ನಲ್ಲಿ ಆಡಿದ್ದು ನಿಜಕ್ಕೂ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದಾರೆ.

‘ನಾವು ಮೂರು ಪಂದ್ಯಗಳನ್ನು ಗೆದ್ದಿರಬಹುದು. ಆದರೆ, ಈ ಪಂದ್ಯ ಗೆಲ್ಲಲು ನಾವು ಪಟ್ಟ ಕಷ್ಟ ನಮ್ಮ ತಂಡದ ಆಟಗಾರರಿಗೆ ಮಾತ್ರ ಗೊತ್ತು. ಇಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವುದನ್ನು ಊಹಿಸಲು ಕೂಡ ಅಸಾಧ್ಯ. ನಮ್ಮ ತಂಡದ ಗೆಲುವು ಅಷ್ಟು ಸುಲಭವಾಗಿರಲಿಲ್ಲ” ಎಂದು ಹೇಳಿದ್ದಾರೆ.

ರೋಹಿತ್​ ಅವರು ಈ ಹಿಂದೆಯೇ ನಸೌ ಪಿಚ್​ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಪಿಚ್​ ಮತ್ತು ಮೈದಾನ ಕ್ರಿಕೆಟ್​ ಆಡಲು ಸೂಕ್ತವಾಗಿಲ್ಲ. ಆಟಗಾರರು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದ್ದರು. ಭಾರತ ಸೂಪರ್​-8 ಹಂತದಲ್ಲಿ ಭಾರತಕ್ಕೆ ಮೊದಲ ಪಂದ್ಯದಲ್ಲಿ ಆಸ್ಟ್ರೇಯಾ ತಂಡದ ಸವಾಲು ಎದುರಾಗುವ ಸಾಧ್ಯತೆ ಇದೆ.

Exit mobile version