ಗಯಾನ: ಗುರುವಾರ ನಡೆದ ಟಿ20 ವಿಶ್ವಕಪ್(T20 World Cup 2024) ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಉಗಾಂಡ ಗೆಲುವಿನ ನಗೆ ಬೀರಿದೆ. ‘ಸಿ’ ಗುಂಪಿನ ಪಂದ್ಯದಲ್ಲಿ ಉಗಾಂಡ ತಂಡ ಪಪುವಾ ನ್ಯೂ ಗಿನಿಯಾಯನ್ನು(Papua New Guinea vs Uganda) 3 ವಿಕೆಟ್ಗಳ ಅಂತರದಿಂದ ಮಣಿಸಿದರೆ, ‘ಬಿ’ ಗುಂಪಿನ ಪಂದ್ಯದಲ್ಲಿ ಒಮಾನ್ ತಂಡ ಆಸ್ಟ್ರೇಲಿಯಾಕ್ಕೆ(Australia vs Oman) ಶರಣಾಯಿತು.
ಖಾತೆ ತೆರೆದ ಉಗಾಂಡ
ಉಂಗಾಡ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. ಅಫಘಾನಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 125 ರನ್ಗಳ ಹೀನಾಯ ಸೋಲು ಕಂಡಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಪುವಾ ನ್ಯೂ ಗಿನಿಯಾ ತಂಡ 19.1 ಓವರ್ಗಳಲ್ಲಿ 77 ರನ್ಗೆ ಆಲೌಟ್ ಆಯಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಉಗಾಂಡ 18.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 78 ರನ್ ಬಾರಿಸಿ ಗೆಲುವು ಸಾಧಿಸಿತು.
ಚೇಸಿಂಗ್ ವೇಳೆ ಉಂಗಾಂಡ ನಾಟಕೀಯ ಕುಸಿತ ಕಂಡಿತು. 26 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸೂಚನೆ ನೀಡಿತು. ಈ ವೇಳೆ ರಿಯಾಝತ್ ಅಲಿ ಶಾ 33 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಂದೊಮ್ಮೆ ಇವರ ವಿಕೆಟ್ ಕೂಡ ಬೀಳುತ್ತಿದ್ದರೆ ಉಂಗಾಡ ಸೋಲು ಕಾಣುತ್ತಿತ್ತು.
ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು
ದಿನದ ಮತ್ತೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಒಮಾನ್ ವಿರುದ್ಧ 39 ರನ್ಗಳ ಪ್ರಯಾಸದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 164 ರನ್ ಬಾರಿಸಿತು. ಆಸೀಸ್ ತಂಡದ ಸಾಮರ್ಥ್ಯಕ್ಕೆ ಇದು ಕನಿಷ್ಠ ಮೊತ್ತ. ಜವಾಬಿತ್ತ ಒಮಾನ್ ಉತ್ತಮ ಪೈಪೋಟಿ ನೀಡಿ 9 ವಿಕೆಟ್ಗೆ 125 ರನ್ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು.
ಆಸೀಸ್ ಪರ ವಿದಾಯದ ಟೂರ್ನಿಯನ್ನಾಡುತ್ತಿರುವ ಡೇವಿಡ್ ವಾರ್ನರ್ ಅವರು ಅಧರ್ಶತಕ ಬಾರಿಸಿ ಮಿಂಚಿದರು. ಒಟ್ಟು 51 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡದ ಪರ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದ ಟ್ರಾವಿಸ್ ಹೆಡ್ (12) ಮತ್ತು ನಾಯಕ ಮಿಚೆಲ್ ಮಾರ್ಷ್ (14), ಆರ್ಸಿಬಿ ತಂಡದ ಗ್ಲೆನ್ ಮ್ಯಾಕ್ಸ್ವೆಲ್ ಶೂನ್ಯ ಸುತ್ತಿ ಘೋರ ವೈಫಲ್ಯ ಕಂಡರು. ಅಂತಿಮ ಹಂತದಲ್ಲಿ ಮಾರ್ಕಸ್ ಸ್ಟೋಯಿನಿಸ್ ಬಾರಿಸಿದ ಅಜೇಯ 67 ರನ್ಗಳ ನೆರವಿನಿಂದ ಆಸೀಸ್ 150ರ ಗಡಿ ದಾಟಿತು. ಒಂದೊಮ್ಮೆ ಸ್ಟೋಯಿನಿಸ್ ತಂಡಕ್ಕೆ ಆಸರೆಯಾಗದೇ ಹೋಗಿದ್ದರೆ ಆಸೀಸ್ ಸೋಲುವ ಎಲ್ಲ ಸಾಧ್ಯತೆಯೂ ಇರುತ್ತಿತ್ತು.
ಇದನ್ನೂ ಓದಿ
ಒಮಾನ್ ಉತ್ತಮ ಬೌಲಿಂಗ್ ದಾಳಿ ನಡೆಸಿದರೂ ಕೂಡ ಬ್ಯಾಟಿಂಗ್ನಲ್ಲಿ ವಿಫಲವಾಯಿತು. ಸೋಲು ಕಂಡರೂ ಕೂಡ ಬಲಿಷ್ಠ ಆಸ್ಟ್ರೇಲಿಯಾದಂತಹ ತಂಡಕ್ಕೆ ತೀವ್ರ ಪೈಪೋಟಿ ನೀಡಿದನ್ನು ಮಾತ್ರ ಮೆಚ್ಚಲೇ ಬೇಕು. ಒಮಾನ್ ಪರ ಮೆಹ್ರಾನ್ ಖಾನ್ 2 ವಿಕೆಟ್ ಕಿತ್ತರು. ಆಸೀಸ್ ಪರ ಸ್ಪಿನ್ನರ್ ಝಾಂಪ (20), ಮಾರ್ಕಸ್ ಸ್ಟೋಯಿನಿಸ್(3) ಮಿಚೆಲ್ ಸ್ಟಾರ್ಕ್(2) ಮತ್ತು ನಥಾನ್ ಎಲ್ಲಿಸ್(2) ವಿಕೆಟ್ ಕಿತ್ತರು.