ಮುಂಬಯಿ: ಟಿ20 ವಿಶ್ವಕಪ್(T20 World Cup 2024) ಆಡಲು ಭಾರತ ತಂಡದ 2ನೇ ಬ್ಯಾಚ್ ಕೂಡ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದೆ. ಸೋಮವಾರ ತಡರಾತ್ರಿ ಯಜುವೇಂದ್ರ ಚಹಲ್(Yuzvendra Chahal), ಅವೇಶ್ ಖಾನ್(Avesh Khan) ಮತ್ತು ಯಶಸ್ವಿ ಜೈಸ್ವಾಲ್(Yashasvi Jaiswal) ಮೂವರು ಮುಂಬೈಯಿಂದ ಪ್ರಯಾಣಿಸಿದರು. ಮೂರನೇ ಬ್ಯಾಚ್ ಇಂದು ಪ್ರಯಾಣಿಸಲಿದೆ. ಈಗಾಗಲೇ ಮೊದಲ ಬ್ಯಾಚ್ನಲ್ಲಿ ಪ್ರಯಾಣಿಸಿದ ತಂಡದ ನಾಯಕ ರೋಹಿತ್ ಶರ್ಮ, ಕೋಚ್ ರಾಹುಲ್ ದ್ರಾವಿಡ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್ಗೆ ತಲುಪಿದ್ದಾರೆ. ಆಟಗಾರರು ತಲುಪಿದ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಕೊಳ್ಳುವ ಮೂಲಕ ತಿಳಿಸಿದೆ.
ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಐಪಿಎಲ್ ಪ್ರದರ್ಶನ ನೋಡಿ ಟಿ20ಯಲ್ಲಿ ಅವಕಾಶ ನೀಡಲಾಗಿದೆ. ಚಹಲ್ ಇದುವರೆಗೆ ಭಾರತ ಪರ 72 ಏಕದಿನ ಪಂದ್ಯಗಳಿಂದ 121 ವಿಕೆಟ್, 80 ಟಿ20 ಆಡಿ 96 ವಿಕೆಟ್ ಕಡೆವಿದ್ದಾರೆ. ಇದುವರೆಗೂ ಟೆಸ್ಟ್ ಕ್ರಿಕೆಟ್ ಆಡಿಲ್ಲ.
2ನೇ ಬ್ಯಾಚ್ನಲ್ಲಿ ಪ್ರಯಾಣಿಸಿದ ಯಜುವೇಂದ್ರ ಚಹಲ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.
ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಭಾರತದ ಬ್ಯಾಟರ್ಗಳಿವರು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಜೂನ್ 5 | ಐರ್ಲೆಂಡ್ | ನ್ಯೂಯಾರ್ಕ್ |
ಜೂನ್ 9 | ಪಾಕಿಸ್ತಾನ | ನ್ಯೂಯಾರ್ಕ್ |
ಜೂನ್ 12 | ಅಮೆರಿಕ | ನ್ಯೂಯಾರ್ಕ್ |
ಜೂನ್ 15 | ಕೆನಡಾ | ಫ್ಲೋರಿಡಾ |