ಪರ್ತ್: ಟಿ20 ಕ್ರಿಕೆಟ್ ವಿಶ್ವ ಕಪ್(T20 World Cup) ಟೂರ್ನಿಯ ‘ಸೂಪರ್ 12’ ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಪಾಕಿಸ್ತಾನ ತಂಡ 6 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಇದು ಈ ಬಾರಿಯ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ಪಾಕ್ ದಾಖಲಿಸಿದ ಮೊದಲ ಗೆಲುವು.
ಪರ್ತ್‌ನ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾನುವಾರದ ದ್ವಿತೀಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಕಲೆಹಾಕಿತು. ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ 13.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ತಂಡಕ್ಕೆ ಶಾದಾಬ್ ಖಾನ್ ಮಾರಕ ಬೌಲಿಂಗ್ ಮೂಲಕ ಆಫಾತ ನೀಡಿದರು. ಮ್ಯಾಕ್ಸ್ ಒ’ಡೌಡ್ ಮತ್ತು ಟಾಮ್ ಕೂಪರ್ ಅವರ ವಿಕೆಟ್ ಪಡೆದು ನೆದರ್ಲೆಂಡ್ಸ್ ತಂಡದ ಬ್ಯಾಟಿಂಗ್ ಶಕ್ತಿ ಮುರಿದರು. ನೆದರ್ಲೆಂಡ್ಸ್ ತಂಡದ ಮೊತ್ತ 26 ಆಗುವ ವೇಳೆ ಪ್ರಮುಖ ಮೂರು ವಿಕೆಟ್ ಕಳೆದು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಣ್ಣ ಮಟ್ಟದ ಹೋರಾಟ ನಡೆಸಿದ ಕಾಲಿನ್ ಅಕರ್ಮನ್(27), ಎಡ್ವರ್ಡ್ಸ್ (15) ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಪಾಕ್ ಪರ ಶಾದಾಬ್ ಖಾನ್ ನಾಲ್ಕು ಓವರ್ಗೆ 22 ರನ್ ಬಿಟ್ಟುಕೊಟ್ಟು 3 ವಿಕೆಟ್ ಉರುಳಿಸಿದರು.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕಳಪೆ ಬ್ಯಾಟಿಂಗ್ ಈ ಪಂದ್ಯದಲ್ಲಿಯೂ ಮುಂದುವರಿಯಿತು. 4 ರನ್ಗೆ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಮೊಹಮ್ಮದ್ ರಿಜ್ವಾನ್ 49 ರನ್ಗೆ ಔಟಾಗಿ ಒಂದು ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಸಂಕ್ಷಿಪ್ತ ಸ್ಕೋರ್
ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 (ಕಾಲಿನ್ ಅಕರ್ಮನ್ 27, ಶಾದಾಬ್ ಖಾನ್ 22ಕ್ಕೆ3, ಮೊಹಮ್ಮದ್ ವಾಸಿಂ ಜೂನಿಯರ್ 5ಕ್ಕೆ2)
ಪಾಕಿಸ್ತಾನ: 13.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 95(ರಿಜ್ವಾನ್ 49, ಫಕಾರ್ ಜಮಾನ್ 20, ಬ್ರೆಂಡನ್ ಗ್ಲೋವರ್ 22ಕ್ಕೆ 2).
ಇದನ್ನೂ ಓದಿ | T20 World Cup | ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ 3 ರನ್ ಜಯ, ಕೊನೇ ಓವರ್‌ನಲ್ಲಿ ಹೈಡ್ರಾಮಾ