Site icon Vistara News

T20 World Cup | ಅಫಘಾನಿಸ್ತಾನ ವಿರುದ್ಧ ಗೆದ್ದರೂ ಆಸ್ಟೇಲಿಯಾಗೆ ಇಲ್ಲ ಸೆಮಿಫೈನಲ್ ಗ್ಯಾರಂಟಿ

t20

ಅಡಿಲೇಡ್​: ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟಿ20 ವಿಶ್ವ ಕಪ್(T20 World Cup )​ ಪಂದ್ಯವನ್ನಾಡಿದ ಅಫಘಾನಿಸ್ತಾನ ತಂಡ ಕೊನೆಯ ಎಸೆತದವರೆಗೂ ಕಠಿಣ ಹೋರಾಟ ನೀಡಿ, ಕೇವಲ 4 ರನ್‌ ಅಂತರದಿಂದ ಸೋಲನುಭವಿಸಿತು. ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಆಡಿರುವ 5 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು 7 ಅಂಕದೊಂದಿಗೆ ಎ ಗ್ರೂಪ್​ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ತನ್ನ ಸೆಮಿಫೈನಲ್​ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ, ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಸೋತರಷ್ಟೇ ಕಾಂಗರೂಗಳು ಸುಗಮವಾಗಿ ಸೇಮಿಸ್​ಗೆ ಎಂಟ್ರಿ ಕೊಡಲಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ರನ್​ರೇಟ್​ ಆಧಾರದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ.

ಅಡಿಲೇಡ್​ ಓವಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಟಿ20 ವಿಶ್ವ ಕಪ್​ನ ಸೂಪರ್​-12 ಮುಖಾಮುಖಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 168 ರನ್​ ಗಳಿಸಿತು. ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ತಂಡ ತನ್ನ ಪಾಲಿನ ಓವರ್​ನಲ್ಲಿ 7 ವಿಕೆಟ್​ಗೆ 164 ರನ್​ ಗಳಿಸಲಷ್ಟೇ ಶಕ್ತವಾಯಿತು.

ಅಫಘಾನಿಸ್ತಾನ ಬ್ಯಾಟ್ಸ್‌ಮನ್‌ಗಳ ಆರಂಭಿಕ ಅಬ್ಬರ
ಗುರಿ ಬೆನ್ನಟ್ಟಿದ ಅಫಘಾನಿಸ್ತಾನ​ ತಂಡ ಆರಂಭದಿಂದಲೇ ಬಿರುಸಿನ ಆಟಕ್ಕೆ ಮುಂದಾಯಿತು. ರಹಮಾನುಲ್ಲಾ ಗುರ್ಬಾಜ್(30) ಅವರ ಅಬ್ಬರದ ಆರಂಭಿಕ ಬಲ ಹಾಗೂ ಬಳಿಕ ಗುಲ್ಬುದಿನ್ ನೈಬ್(39) ಮತ್ತು ಇಬ್ರಾಹಿಂ ಜದ್ರಾನ್(26) ಅವರ 59 ರನ್‌ಗಳ ಅತ್ಯುತ್ತಮ ಜತೆಯಾಟ ಅಫ್ಘಾನಿಸ್ತಾನಕ್ಕೆ ಗೆಲುವಿನ ಭರವಸೆ ನೀಡಿತು. ಆದರೆ ಆಸ್ಟ್ರೇಲಿಯಾ ಒಂದು ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪುನರಾಗಮನ ಮಾಡಿತು. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮಿಂಚಿನ ಎಸೆತದಲ್ಲಿ ಗುಲ್ಬುದಿನ್ ನೈಬ್ ರನ್ ಔಟ್ ಆದರೆ, ಅದೇ ಓವರ್‌ನಲ್ಲಿ ಸ್ಪಿನ್ನರ್ ಆ್ಯಡಂ ಜಂಪಾ ಮತ್ತೆರಡು ವಿಕೆಟ್ ಕಿತ್ತರು. ಉತ್ತಮವಾಗಿ ಆಡುತ್ತಿದ್ದ ಅಫಘಾನಿಸ್ತಾನ 99ಕ್ಕೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಕೊನೆಯ ಹಂತದಲ್ಲಿ ಮಿಂಚಿನ ಬ್ಯಾಟಿಂಗ್​ ಮೂಲಕ ಹೊರಾಟವನ್ನು ಜಾರಿಯಲ್ಲಿರಿಸಿದರು. ಕೇವಲ 23 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಆದರೆ ಕೊನೆಯ ಓವರ್‌ ಎಸೆದ ಮಾರ್ಕಸ್ ಸ್ಟೋಯ್ನಿಸ್​ ಅವರು ರಶೀದ್​ ಅಬ್ಬರದ ನಡುವೆಯೂ ಆಸ್ಟ್ರೇಲಿಯಾದ ಮಾನ ಕಾಪಾಡುವಲ್ಲಿ ಯಶಸ್ವಿಯಾದರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ಪರ ಗ್ಲೆನ್​ ಮ್ಯಾಕ್ಸ್​ವೆಲ್​(54), ಮಾರ್ಕಸ್ ಸ್ಟೋಯ್ನಿಸ್(25), ಮಿಚೆಲ್​ ಮಾರ್ಷ್​(45) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಫಘಾನಿಸ್ತಾನ ಪರ ನವೀನ್​ ಉಲ್​ ಹಕ್​ ಮೂರು ವಿಕೆಟ್​ ಕಿತ್ತು ಮಿಂಚಿದರು.

ಸಂಕ್ಷಿಪ್ತ ಸ್ಕೋರ್​:

ಆಸ್ಟ್ರೇಲಿಯಾ: 20 ಓವರ್​ಗಳಲ್ಲಿ 8 ವಿಕೆಟ್​ಗೆ 168(ನ್​ ಮ್ಯಾಕ್ಸ್​ವೆಲ್​ 54, ಮಿಚೆಲ್​ ಮಾರ್ಷ್​ 45, ನವೀನ್​ ಉಲ್​ ಹಕ್​ 21ಕ್ಕೆ3)

ಅಫಘಾನಿಸ್ತಾನ: 20 ಓವರ್​ಗಳಲ್ಲಿ 7 ವಿಕೆಟ್​ಗೆ 164(ರಶೀದ್ ಖಾನ್ ಅಜೇಯ 48, ಗುಲ್ಬುದಿನ್ ನೈಬ್ 39, ಜಂಪಾ 22ಕ್ಕೆ2, ಜೋಶ್​ ಹ್ಯಾಜಲ್​ವುಡ್​ 33ಕ್ಕೆ 2).

ಇದನ್ನೂ ಓದಿ | Team India | ಮೆಲ್ಬೋರ್ನ್​ ತಲುಪಿದ ರೋಹಿತ್​ ಪಡೆ; ಶುಕ್ರವಾರದಿಂದ ಅಭ್ಯಾಸ ಆರಂಭ

Exit mobile version