Site icon Vistara News

T20 World Cup | ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಬಾಂಗ್ಲಾಗೆ 3 ರನ್​ ಜಯ, ಕೊನೇ ಓವರ್‌ನಲ್ಲಿ ಹೈಡ್ರಾಮಾ

bng

ಬ್ರಿಸ್ಬೇನ್​: ಟಿ20 ವಿಶ್ವ ಕಪ್‌ (T20 World Cup) ನಲ್ಲಿ ಮತ್ತೊಂದು ರೋಚಕ ಫಲಿತಾಂಶಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಭಾನುವಾರದ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳ ಮುಖಾಮುಖಿಯಲ್ಲಿ ಅಂತಿಮ ಓವರ್‌ನಲ್ಲಿ ಎರಡು ತಂಡಗಳಿಗೂ ಗೆಲ್ಲುವ ಅವಕಾಶವಿದ್ದರೂ ಜಿಂಬಾಬ್ವೆ ತಂಡ ಎಡವಿ ಬಾಂಗ್ಲಾದೇಶ ವಿರುದ್ಧ 3 ರನ್‌ ಅಂತರದಿಂದ ಸೋಲನುಭವಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಜಿಂಬಾಬ್ವೆ ತನ್ನ ಪಾಲಿನ ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕ್​ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಬೀಗಿದ್ದ ಜಿಂಬಾಬ್ವೆಗೆ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಒಂದೊಮ್ಮೆ ಜಿಂಬಾಬ್ವೆ ಈ ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದರೆ ಸೆಮಿಫೈನಲ್​ಗೇರುವ ಅವಕಾಶವೊಂದು ಜೀವಂತ ಇರಿಸಬಹುದಿತ್ತು. ಆದರೆ ಈ ಸೋಲಿನಿಂದ ಜಿಂಬ್ವಾಬೆ ಸೆಮಿ ಹಾದಿ ಮತ್ತಷ್ಟು ಕ್ಷೀಣವಾದಂತಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶಕ್ಕೆ ಆರಂಭಿಕ ಆಟಗಾರ ಶಂಟೋ ಅರ್ಧಶತಕದ ನೆರವು ನೀಡಿದರು. 55 ಎಸೆತ ಆಡಿದ ಶಂಟೋ 71 ರನ್ ಗಳಿಸಿದರೆ, ಅಫಿಫ್ ಹೊಸೈನ್ 29 ರನ್, ಶಕೀಬ್ ಅಲ್​ ಹಸನ್​ 23 ರನ್ ಗಳಿಸಿದರು. ಗುರಿ ಬೆನ್ನತ್ತಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯಲಿಲ್ಲ. ಆದರೆ ತಂಡವನ್ನು ಆಧರಿಸಿದ ಸೀನ್ ವಿಲಿಯಮ್ಸ್ 64 ರನ್ ಗಳಿಸಿದರು. ರಿಯಾನ್ ಬುರ್ಲ್ (27) ಉತ್ತಮ ನಿರ್ವಹಣೆ ತೋರಿದರು. ಬಾಂಗ್ಲಾ ಪರ ಟಸ್ಕಿನ್​ ಅಹ್ಮದ್​ ನಾಲ್ಕು ಓವರ್​ನಲ್ಲಿ ಒಂದು ಮೇಡನ್​ ಸಹಿತ 19 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಉರುಳಿಸಿದರು.

ಮತ್ತೆ ಲಾಸ್ಟ್​ ಓವರ್​ ಥ್ರಿಲ್ಲಿಂಗ್​

ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ಲಾಸ್ಟ್ ಓವರ್​ನಲ್ಲಿ ಗೆಲುವು ಸಾಧಿಸಿತ್ತು. ಆದರೆ ಬಾಂಗ್ಲಾ ವಿರುದ್ಧದ ಲಾಸ್ಟ್​ ಓವರ್​ನಲ್ಲಿ ಗೆಲ್ಲುವ ಅವಕಾಶವನ್ನು ಜಿಂಬಾಬ್ವೆ ಕಳೆದುಕೊಂಡಿತು. ಕೊನೆಯ ಓವರ್​ನಲ್ಲಿ​ ಜಿಂಬಾಬ್ವೆ ಗೆಲುವಿಗೆ 16 ರನ್ ಅಗತ್ಯವಿತ್ತು. ಮೊಸದಿಕ್ ಹುಸೈನ್ ಎಸೆದ ಓವರ್​ನ ಮೊದಲ ಎಸೆತದಲ್ಲಿ ಬುರ್ಲ್ ಸಿಂಗಲ್ ತೆಗೆದರು. ಎರಡನೇ ಎಸೆತಕ್ಕೆ ಇವಾನ್ಸ್ ಔಟ್. ಮೂರನೇ ಎಸೆತಕ್ಕೆ ಎಂಗರವಾ ಲೆಗ್ ಬೈ ಮೂಲಕ ನಾಲ್ಕು ರನ್ ಗಳಿಸಿದರು. ನಾಲ್ಕನೇ ಎಸೆತಕ್ಕೆ ಭರ್ಜರಿ ಸಿಕ್ಸರ್. ಎರಡು ಎಸೆತಕ್ಕೆ ಐದು ರನ್ ಬೇಕಾಗಿದ್ದಾಗ ಎಂಗರವಾ ಔಟ್ ಆದರು. ಕೊನೆಯ ಎಸೆತಕ್ಕೆ ಬ್ಯಾಟಿಂಗ್ ನಡೆಸಲು ಬಂದ ಬ್ಲೆಸಿಂಗ್ ಮುಜುರಬಾನಿ ಸ್ಟಂಪೌಟಾದರು.

ಬಾಂಗ್ಲಾ ಆಟಗಾರರು ಗೆಲುವಿನ ಸಂಭ್ರಮ ಆಚರಿಸಿದರು. ಆದರೆ ಅಂಪೈರ್ ಈ ಎಸೆತವನ್ನು ನೋಬಾಲ್ ನೀಡಿದರು. ಮತ್ತೆ ಬಾಂಗ್ಲಾ ಪಾಳಯದಲ್ಲಿ ನಡುಕ ಹುಟ್ಟಿಕೊಂಡಿತು. ಬಾಂಗ್ಲಾ ವಿಕೆಟ್ ಕೀಪರ್ ನೂರುಲ್ ಸ್ಟಂಪ್ಡ್​ ಮಾಡುವ ಭರದಲ್ಲಿ ಸ್ಟಂಪ್ ಗಿಂತ ಮುಂದೆ ಚೆಂಡನ್ನು ಕಲೆಕ್ಟ್ ಮಾಡಿ ಔಟ್ ಮಾಡಿದ್ದು ಇದಕ್ಕೆ ಕಾರಣ. ಆದರೆ ಗೆಲುವಿಗೆ ಸಿಕ್ಕ ಮತ್ತೊಂದು ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ ಬ್ಲೆಸಿಂಗ್ ಮುಜುರಬಾನಿ ರನ್ ಗಳಿಸಲು ವಿಫಲರಾದರು. ಇಲ್ಲಿಗೆ ಬಾಂಗ್ಲಾ ಕೈ ಮೇಲಾಯಿತು. ಮೂರು ರನ್​ ಅಂತರದ ಗೆಲುವು ಸಾಧಿಸಿ ಮತ್ತೆ ಗೆಲುವಿನ ಸಂಭ್ರಮಾಚರಣೆ ಮಾಡಿತು.

ಸಂಕ್ಷಿಪ್ತ ಸ್ಕೋರ್​

ಬಾಂಗ್ಲಾದೇಶ: 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 (ಶಂಟೋ 71, ಅಫಿಫ್ ಹೊಸೈನ್ 29, ಮುಜುರಬಾನಿ 13ಕ್ಕೆ 2)

ಜಿಂಬಾಬ್ವೆ: 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 (ಸೀನ್ ವಿಲಿಯಮ್ಸ್ 64, ಟಸ್ಕಿನ್​ ಅಹ್ಮದ್​ 19ಕ್ಕೆ3)

ಇದನ್ನೂ ಓದಿ | T20 World Cup | ಗ್ಲೆನ್​ ಫಿಲಿಪ್ಸ್​ ಶತಕ; ಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್​ ಗೆಲುವು

Exit mobile version