ಸಿಡ್ನಿ: ಟಿ20 ವಿಶ್ವ ಕಪ್(T20 World Cup) ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 4 ವಿಕೆಟ್ ಅಂತರದಿಂದ ಗೆದ್ದು ಬೀಗಿದೆ. ಇದೀಗ 2ನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಿಡ್ನಿ ತಲುಪಿದ್ದು ಅಭ್ಯಾಸವನ್ನೂ ಆರಂಭಿಸಿದೆ. ಆದರೆ ಈ ಅಭ್ಯಾಸದ ವೇಳೆ ಪಾಕಿಸ್ತಾನದ ವೇಗಿ ಕೂಡ ಕಾಣಿಸಿಕೊಂಡಿರುವುದು ವಿಶೇಷ.
ಟೀಮ್ ಇಂಡಿಯಾದ ಅಭ್ಯಾಸದ ವೇಳೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್ ಜೂನಿಯರ್ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ ‘ಎ’ ತಂಡದ ಬೌಲರ್ ಆಗಿರುವ ಇರ್ಫಾನ್ ಸದ್ಯ ಆಸ್ಟ್ರೇಲಿಯಾದಲ್ಲಿ ನ್ಯೂ ಸೌತ್ ವೇಲ್ಸ್‌ನ ವೆಸ್ಟರ್ನ್ ಸಬರ್ಬ್ ಡಿಸ್ಟ್ರಿಕ್ಟ್ ಪರ ಗ್ರೇಡ್ ಕ್ರಿಕೆಟ್ ಆಡುತ್ತಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸಕ್ಕಾಗಿ ಟೀಮ್ ಇಂಡಿಯಾ ಮೊಹಮ್ಮದ್ ಇರ್ಫಾನ್ ಅವರನ್ನು ಬಳಸಿಕೊಂಡಿದೆ. ಈ ಹಿಂದೆ ಆಸ್ಟ್ರೇಲಿಯಾದ ತಂಡ ನೆಟ್ ಬೌಲರ್ ಆಗಿಯೂ ಪಾಕ್ ವೇಗಿ ಕಾಣಿಸಿಕೊಂಡಿದ್ದರು. ಇದೀಗ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಮೊಹಮ್ಮದ್ ಇರ್ಫಾನ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅತ್ಯುತ್ತಮ ವೇಗ ಹಾಗೂ ಬೌಲಿಂಗ್ ಮೂಲಕ ಕಿಂಗ್ ಕೊಹ್ಲಿ ಹಾಗೂ ಹಿಟ್ಮ್ಯಾನ್ ಅವರ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಬೌನ್ಸಿ ಪಿಚ್ಗಳೇ ಇರುವುದರಿಂದ ಬ್ಯಾಟರ್ಗಳಿಗೆ ಬ್ಯಾಟ್ ಬೀಸುವುದು ಕಷ್ಟಕರವಾಗಿದೆ. ನಾನು ಎತ್ತರ ಇರುವ ಕಾರಣ ನನ್ನ ಎಸೆತಗಳನ್ನು ಎದುರಿಸುವುದು ಬ್ಯಾಟ್ಸ್ಮನ್ಗಳಿಗೆ ಕಷ್ಟವಾಗುತ್ತದೆ. ನಾನು ಕೂಡ ಸಾಧ್ಯವಾದಷ್ಟು ಬ್ಯಾಟ್ಸ್ಮನ್ಗಳನ್ನು ಕಾಡಲು ಯತ್ನಿಸುತ್ತೇನೆ. ಅದೇ ರೀತಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೂ ಬೌಲಿಂಗ್ ಮಾಡಿದ್ದೇನೆ. ಇಬ್ಬರೂ ಕೂಡ ನನ್ನ ಬೌಲಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ನನ್ನ ಕ್ರಿಕೆಟ್ ಬದುಕಿಗೆ ಶುಭವನ್ನು ಕೋರಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು ಎಂದು ಮೊಹಮ್ಮದ್ ಇರ್ಫಾನ್ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | IND VS PAK | ಸಾಕು ಟಿ20 ವಿಶ್ವ ಕಪ್ ಕೂಟವನ್ನು ನಿಲ್ಲಿಸಿ! ಮಾರ್ಷ್ ಹೀಗೆ ಹೇಳಿದ್ದೇಕೆ?