ಪರ್ತ್: ಈ ಬಾರಿಯ ಟಿ20 ವಿಶ್ವ ಕಪ್ನಲ್ಲಿ ಬಲಿಷ್ಠ ತಂಡ ಎನಿಸಿಕೊಂಡಿದ್ದ ಪಾಕಿಸ್ತಾನ ತಂಡ ಕೂಟದ ಅಂಡರ್ ಡಾಗ್ಸ್ ಎಂದೇ ಕರೆಯಲ್ಟಟ್ಟಿದ್ದ ಜಿಂಬಾಬ್ವೆ ವಿರುದ್ಧ ಸೋತು ಕೂಟದಿಂದ ಹೊರ ಬೀಳುವ ಸ್ಥಿತಿಗೆ ಬಂದು ನಿಂತಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 4 ವಿಕೆಟ್ ಅಂತರದಿಂದ ಸೋಲು ಕಂಡಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿಯೂ ಸೋಲನುಭವಿಸಿ ಬಿ ಗ್ರೂಪ್ನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಪಾಕಿಸ್ತಾನದ ಮುಂದಿನ ಗತಿಯೇನು ಎಂಬ ಅವಲೋಕನವೊಂದನ್ನು ಇಲ್ಲಿ ಮಾಡಲಾಗಿದೆ.
ಮೂರು ಪಂದ್ಯ ಬಾಕಿ
ಬಾಬರ್ ಪಡೆಗೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ಎದುರಾಳಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನೆದರ್ಲೆಂಡ್ಸ್. ಆದರೆ ಈಗಾಗಲೇ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲೆಡರು ಸ್ಥಾನದಲ್ಲಿದೆ ಕಾಣಿಸಿಕೊಂಡು ಸದ್ಯದ ಮಟ್ಟಿಗೆ ಸೇಫ್ ಜೋನ್ನಲ್ಲಿದೆ. ಮೂರನೇ ಸ್ಥಾನದಲ್ಲಿ ಜಿಂಬಾಬ್ವೆ ತಂಡವಿದೆ. ಈ ತಂಡಗಳಿಗೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಸದ್ಯ ಈ ತಂಡದ ಫಲಿತಾಂಶದ ಮೇಲೆ ಪಾಕಿಸ್ತಾನ ಭವಿಷ್ಯ ಅಡಗಿದೆ.
ಪಾಕಿಸ್ತಾನಕ್ಕೂ ಸೆಮಿ ಅವಕಾಶವಿದೆ
ಒಂದೊಮ್ಮೆ ಪಾಕಿಸ್ತಾನ ಮುಂದಿನ ಮೂರು ಪಂದ್ಯದಲ್ಲಿ ಗೆದ್ದರೆ ಪಾಕಿಸ್ತಾನಕ್ಕೆ ಸೆಮಿ ಫೈನಲ್ಗೇರುವ ಅವಕಾಶವಿದೆ. ಆದರೆ ಕೇವಲ ಗೆಲುವಷ್ಟೇ ಸಾಲದು ಜತೆಗೆ ರನ್ರೇಟ್ ಕೂಡ ಬೇಕಿದೆ. ಒಂದೊಮ್ಮೆ ಪಾಕ್ ಮೂರು ಪಂದ್ಯ ಗೆದ್ದರೆ ಆಗ 6 ಅಂಕ ಲಭಿಸುತ್ತದೆ. ಇನ್ನು ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿರುವುದರಿಂದ ಅಗ್ರ ಎರಡು ಸ್ಥಾನದಲ್ಲಿರುವ ತಂಡಗಳ ಮುಂದಿನ ಪಂದ್ಯ ಮಳೆಯಿಂದ ರದ್ದಾದರೆ ಆಗ ಅಂಕ ಹಂಚಿಕೆಯಾಗುತ್ತದೆ. ಇದು ಕೂಡ ಪಾಕ್ ಸೆಮಿ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಪಾಕ್ಗೆ ಬಾಕಿ ಇರುವ ಮೂರು ಪಂದ್ಯದಲ್ಲಿ ಒಂದು ಪಂದ್ಯವೂ ಮಳೆಯಿಂದ ರದ್ದಾಗಬಾರದು. ಹೀಗೆ ಹಲವು ಲೆಕ್ಕಾಚಾರದಲ್ಲಿ ನೋಡುವುದಾದರೆ ಪಾಕ್ ಸೆಮಿ ಹಾದಿ ಇನ್ನೂ ಜೀವಂತವಾಗಿದೆ. ಆದ್ದರಿಂದ ಬಿ ಗ್ರೂಪ್ನ ಉಳಿದ ತಂಡಗಳ ಸೋಲುನ್ನು ಪಾಕ್ ಹಾರೈಸಬೇಕಿದೆ.
ಇದನ್ನೂ ಓದಿ | T20 World Cup | ಭಾರತ-ನೆದರ್ಲೆಂಡ್ಸ್ ಪಂದ್ಯದ ವೇಳೆ ಯುವಕನ ಪ್ರೇಮ ನಿವೇದನೆ, ಒಪ್ಪಿದಳಾ ಯುವತಿ?