ಅಡಿಲೇಡ್: ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದ ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್-ಎಡಗೈ ಬ್ಯಾಟರ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿಯೂ ಕಣಕ್ಕಿಳಿಯುವ ಬಗ್ಗೆ ತಂಡದ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ.
ಟಿ20 ವಿಶ್ವ ಕಪ್‌ನಲ್ಲಿ ಭಾರತ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಅನುಭವಿ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಆಡಿದ್ದರೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಈ ನಿಟ್ಟಿನಲ್ಲಿ ಕ್ರಿಕೆಟ್ ಪಂಡಿತರು ಪಂತ್‌ಗೆ ಅವಕಾಶ ನೀಡುವಂತೆ ಒತ್ತಾಸೆ ಮಾಡಿದ್ದರು. ಅದರಂತೆ ಜಿಂಬಾಬ್ವೆ ವಿರುದ್ಧದ 5ನೇ ಪಂದ್ಯದಲ್ಲಿ ಪಂತ್‌ಗೆ ಅವಕಾಶ ನೀಡಲಾಯಿತು. ಆದರೆ ಪಂತ್ ಈ ಪಂದ್ಯದಲ್ಲಿ 3 ರನ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಪಂತ್ ಅವರ ಈ ವೈಫಲ್ಯಕ್ಕೆ ಎಲ್ಲಡೆಯಿಂದ ವಿರೋಧ ವ್ಯಕ್ತವಾಗಿತ್ತು. ಪಂತ್‌ಗೆ ಇನ್ನೂ ಬುದ್ಧಿ ಬಂದಿಲ್ಲ ಎಂಬ ಟೀಕೆಗಳು ಟ್ವಿಟರ್‌ನಲ್ಲಿ ಕೇಳಿಬಂದಿತ್ತು.
ಇದೀಗ ಪಂತ್ ವಿಚಾರದಲ್ಲಿ ಮಾತನಾಡಿದ ತಂಡದ ಕೋಚ್ ರಾಹುಲ್ ದ್ರಾವಿಡ್, ಆಟಗಾರರ ಬಗ್ಗೆ ಒಂದು ಪಂದ್ಯದಿಂದ ನಿರ್ಧರಿಸಲಾಗದು. ಒಂದು ಪಂದ್ಯದ ವೈಫಲ್ಯವನ್ನು ಮುಂದಿಟ್ಟು ಬಳಿಕದ ಪಂದ್ಯದಲ್ಲಿ ಆಡಿಸಬೇಕೆ, ಬೇಡವೇ ಎಂಬ ನಿರ್ಧಾರವಾಗದು. ನಾವೆಂದು ಪಂತ್ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ. ನಮ್ಮ ತಂಡದ 15 ಆಟಗಾರರ ಬಗ್ಗೆ ನಮಗೆ ವಿಶ್ವಾಸವಿದೆ. ಆದರೆ 11 ಆಟಗಾರರನ್ನು ಮಾತ್ರ ಆಡಿಸಲು ಸಾಧ್ಯ. ಕೆಲ ಪರಿಸ್ಥಿತಿಗೆ ತಕ್ಕಂತೆ ಆಟಗಾರರನ್ನು ಆಡಿಸುತ್ತೇವೆ ಎಂದು ಹೇಳುವ ಮೂಲಕ ಪಂತ್‌ಗೆ ಮುಂದಿನ ಪಂದ್ಯದಲ್ಲಿಯೂ ಅವಕಾಶ ನೀಡುವ ಮುನ್ಸೂಚನೆ ನೀಡಿದ್ದಾರೆ.
ಇದನ್ನೂ ಓದಿ | T20 World Cup | ಈ ತಂಡ ವಿಶ್ವ ಕಪ್ ಗೆಲ್ಲುವುದು ಖಚಿತ; ಎಬಿಡಿ ಆಯ್ಕೆಯ ತಂಡ ಯಾವುದು?