ಸಿಡ್ನಿ: ಐಸಿಸಿ ಟಿ20 ವಿಶ್ವ ಕಪ್(T20 World Cup)ನ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಆಂಗ್ಲರ ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿದ್ದು ಕೂಟದಿಂದಲೇ ಹೊರಬಿದ್ದಿದೆ.
ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 141 ರನ್ ಗಳಿಸಿತು. ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಸಾಧಾರಣ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಜಾಸ್ ಬಟ್ಲರ್ (೨೮), ಅಲೆಕ್ಸ್ ಹೇಲ್ಸ್ (೪೭) ಉತ್ತಮ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ ೭೫ ರನ್ ಒಟ್ಟುಗೂಡಿಸಿತು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಬೆನ್ ಸ್ಟೋಕ್ಸ್ ಅಜೇಯ ೪೨ ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಲಂಕಾ ಪರ ವನಿಂದು ಹಸರಂಗ, ಲಹಿರು ಕುಮಾರ ಮತ್ತು ಧನಂಜಯ ಡಿ ಸಿಲ್ವ ತಲಾ ೨ ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಶೀಲಂಕಾ ತಂಡ ಉತ್ತಮ ಆರಂಭ ಪಡೆದರೂ ಬಳಿಕ ಹಠಾತ್ ಕುಸಿತ ಕಂಡಿತು. ಆರಂಭಿಕ ಆಟಗಾರ ಪಾಥುಮ್ ನಿಸ್ಸಂಕ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ನಿಸ್ಸಂಕ ೪೫ ಎಸೆತಗಳಿಂದ ೬೭ ರನ್ ಬಾರಿಸಿದರು. ಈ ವೇಳೆ ೫ ಸಿಕ್ಸರ್ ಮತ್ತು ೨ ಬೌಂಡರಿ ದಾಖಲಾಯಿತು. ಉಳಿದಂತೆ ಭನುಕಾ ರಾಜಪಕ್ಸೆ ೨೨ ರನ್ ಗಳಿಸಿದರು. ಇಂಗ್ಲೆಂಡ್ ಪರ ಮಾರ್ಕ್ ವುಡ್ ಮೂರು ವಿಕೆಟ್ ಕಿತ್ತು ಲಂಕಾ ಬ್ಯಾಟರ್‌ಗಳನ್ನು ಕಾಡಿದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: ೨೦ ಓವರ್‌ಗಳಲ್ಲಿ 8 ವಿಕೆಟ್‌ಗೆ 141 (ಪಾಥುಮ್ ನಿಸ್ಸಂಕ ೬೭, ಭಾನುಕ ರಾಜಪಕ್ಸೆ ೨೨, ಮಾರ್ಕ್ ವುಡ್ ೨೬ಕ್ಕೆ೩)
ಇಂಗ್ಲೆಂಡ್: 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 144(ಅಲೆಕ್ಸ್ ಹೇಲ್ಸ್ ೪೭, ಬೆನ್ ಸ್ಟೋಕ್ಸ್ ಅಜೇಯ ೪೨, ಜಾಸ್ ಬಟ್ಲರ್ ೨೮, ಧನಂಜಯ ಡಿ ಸಿಲ್ವ ೨೪ಕ್ಕೆ೨, ಲಹಿರು ಕುಮಾರ ೨೪ಕ್ಕೆ೨) ಪಂದ್ಯಶ್ರೇಷ್ಠ: ಆದಿಲ್ ರಶೀದ್
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಧಾರ ಹೇಗೆ?