ಸಿಡ್ನಿ: ಗ್ಲೆನ್ ಫಿಲಿಪ್ಸ್ (104)ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಟ್ರೆಂಟ್ ಬೌಲ್ಟ್ ಅವರ ಘಾತಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧ 65 ರನ್ ಅಂತರದ ಸೋಲು ಕಂಡಿದೆ. ನ್ಯೂಜಿಲೆಂಡ್ ಈ ಗೆಲುವಿನೊಂದಿಗೆ 5 ಅಂಕ ಗಳಿಸಿ “ಎ” ಗ್ರೂಪ್ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಶನಿವಾರದ ಟಿ20 ವಿಶ್ವ ಕಪ್ನ ಸೂಪರ್-12 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸವಾಲೊಡ್ಡಿತು. ಸಾಧಾರಣ ಮೊತ್ತ ಗುರಿ ಬೆನ್ನಟ್ಟಿದ ಶ್ರೀಲಂಕಾ 19.2 ಓವರ್ಗಳಲ್ಲಿ 102 ರನ್ ಗಳಿಸಿ ಸರ್ವಪತನ ಕಂಡಿತು.
ಚೇಸಿಂಗ್ ವೇಳೆ ಶ್ರೀಲಂಕಾ 8 ರನ್ಗೆ 4 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸೋಲಿನ ಸುಳಿಗೆ ಸಿಲುಕಿತು. ಲಂಕಾದ ಈ ಸ್ಥಿತಿ ಕಂಡಾಗ ಇನ್ನೇನು 20 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಉದುರಿ ಹೋಗುತ್ತದೆ ಎಂದು ಊಹಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ದಶುನ್ ಶನಕ(35) ಮತ್ತು ಭಾನುಕ ರಾಜಪಕ್ಸ (34) ಸಣ್ಣ ಮಟ್ಟದ ಹೋರಾಟವೊಂದನ್ನು ನಡೆಸಿ ತಂಡದ ಮೊತ್ತ ನೂರರ ಗಡಿ ದಾಟಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ದಾಳಿ ನಡೆಸಿ ಮಿಂಚಿದರು. ನಾಲ್ಕು ಓವರ್ ಎಸೆದು ಕೇವಲ 13 ರನ್ ಬಿಟ್ಟು ಕೊಟ್ಟು 4 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಫಿನ್ ಅಲೆನ್(1), ಡೆವೋನ್ ಕಾನ್ವೆ(1) ಮತ್ತು ಕೇನ್ ವಿಲಿಯಮ್ಸನ್(8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಗ್ಲೆನ್ ಫಿಲಿಪ್ಸ್ ಲಂಕಾ ಬೌಲರ್ಗಳ ಮೇಲೆರಗಿ ಶತಕ ಬಾರಿಸಿದರು. ಅವರು 64 ಎಸೆತದಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 104 ರನ್ ಸಿಡಿಸಿದರು. ಇವರಿಗೆ ಡೇರಿಯಲ್ ಮಿಚೆಲ್(22) ಉತ್ತಮ ಸಾಥ್ ನೀಡಿದರು. ಲಂಕಾ ಪರ ರಜಿತ 23ಕ್ಕೆ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167( ಫಿಲಿಪ್ಸ್ 104, ಮಿಚೆಲ್ 22, 23ಕ್ಕೆ 2).
ಶ್ರೀಲಂಕಾ: 19.2 ಓವರ್ಗಳಲ್ಲಿ 102ಕ್ಕೆ ಆಲೌಟ್(ದಶುನ್ ಶಣಕ 35, ರಾಜಪಕ್ಷ 34, ಬೌಲ್ಟ್ 13ಕ್ಕೆ4, ಸ್ಯಾಂಟ್ನರ್ 21ಕ್ಕೆ2). ಪಂದ್ಯಶ್ರೇಷ್ಠ: ಗ್ಲೆನ್ ಫಿಲಿಪ್ಸ್
ಇದನ್ನೂ ಓದಿ | T20 World Cup | ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಹುಲ್ ಬದಲು ಪಂತ್ಗೆ ಅವಕಾಶ?