ದುಬೈ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್(T20 World Cup) ಕೂಟದ ಸೂಪರ್-12 ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪಿದೆ. ಇದೇ ವೇಳೆ ಐಸಿಸಿ ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಅದರಂತೆ ಟಿ20 ವಿಶ್ವ ಕಪ್ನ ಸೆಮಿ ಫೈನಲ್ಗಳು ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನಿರ್ಣಯಿಸಲು ಎರಡೂ ಇನಿಂಗ್ಸ್ಗಳಲ್ಲಿ ಕನಿಷ್ಠ ಹತ್ತು ಓವರ್ ಆಟ ನಡೆಯಬೇಕು ಎಂದು ಸೂಚಿಸಿದೆ.
ಟಿ20 ವಿಶ್ವ ಕಪ್ ಆರಂಭಕ್ಕೂ ಮುನ್ನವೆ ಐಸಿಸಿ ಕೆಲ ನಿಯವನ್ನು ಜಾರಿಗೊಳಿಸಿತ್ತು. ಗ್ರೂಪ್ ಹಂತದ ಪಂದ್ಯಗಳು ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರವನ್ನು ಪ್ರಕಟಿಸಿತ್ತು. ಆದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಿತ್ತು. ಆದರೆ ಇದೀಗ ಆಸ್ಟ್ರೇಲಿಯಾದಲ್ಲಿ ಮಳೆ ಕಾಟ ನಿಲ್ಲುವಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಐಸಿಸಿ ಹಿಂದಿನ ನಿಯಮವನ್ನು ಮತ್ತೆ ತಿದ್ದುಪಡಿ ಮಾಡಿ ಹೊಸ ನಿಯಮವನ್ನು ಪ್ರಕಟಿಸಿದೆ.
ಇದೀಗ ಐಸಿಸಿ ಪ್ರಕಟಿಸಿದ ಹೊಸ ನಿಯಮದ ಪ್ರಕಾರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನಿರ್ಣಯಿಸಲು ಎರಡೂ ಇನಿಂಗ್ಸ್ಗಳಲ್ಲಿ ಕನಿಷ್ಠ ಹತ್ತು ಓವರ್ ಆಟ ನಡೆಯಬೇಕು ಎಂದು ಸೂಚಿಸಿದೆ. ಸೆಮಿ ಫೈನಲ್ ನಲ್ಲಿ ಮಳೆಯ ಕಾರಣಕ್ಕೆ ಒಂದು ವೇಳೆ ತಲಾ ಹತ್ತು ಓವರ್ ನ ಪಂದ್ಯ ನಡೆಯಲು ಅವಕಾಶ ಸಿಗಿದ್ದರೆ ಅದೇ ಪಂದ್ಯ ಮೀಸಲು ದಿನದಂದು ನಡೆಯಲಿದೆ. ಆದರೆ ಮೀಸಲು ದಿನದಲ್ಲೂ ಮಳೆ ಕಾಟ ಎದುರಾಗಿ ಕನಿಷ್ಠ ತಲಾ ಹತ್ತು ಓವರ್ ಪಂದ್ಯ ನಡೆಯದಿದ್ದರೆ, ಆಗ ಅಂಕ ಪಟ್ಟಿಯಲ್ಲಿ ಯಾವ ತಂಡ ಮುಂದಿರುತ್ತದೋ ಆ ತಂಡವು ಫೈನಲ್ ಪ್ರವೇಶ ಮಾಡಲಿದೆ. ಅದರಂತೆ ಫೈನಲ್ ವೇಳೆಯೂ ಇದೇ ಪರಿಸ್ಥಿತಿ ಮುಂದುವರಿದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ನವೆಂಬರ್ 9 ಮತ್ತು 10ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ, ನ.13ರಂದು ಮೆಲ್ಬೋರ್ನ್‌ನಲ್ಲಿ ಫೈನಲ್ ನಡೆಯಲಿದೆ.
ಇದನ್ನೂ ಓದಿ | T20 World Cup | ನಾಯಕನ ಸ್ಥಾನಕ್ಕೆ ವಿದಾಯ ಹೇಳಿದ ಅಫಘಾನಿಸ್ತಾನದ ಮೊಹಮ್ಮದ್ ನಬಿ