ಸಿಡ್ನಿ: ಪಾಕಿಸ್ತಾನ ವಿರುದ್ಧದ ಭಾನುವಾರದ ಹೈವೋಲ್ಟೇಜ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿ ಫುಲ್ ಜೋಶ್ನಲ್ಲಿರುವ ಟೀಮ್ ಇಂಡಿಯಾ ಗುರುವಾರ(ಅಕ್ಟೋಬರ್ 27) ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಎದುರು ಸೆಣಸಾಡಲಿದೆ. ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಸೆಮಿ ಫೈನಲ್ ಹಾದಿಯನ್ನು ಸುಗಮಗೊಳಿಸುವುದು ರೋಹಿತ್ ಪಡೆಯ ಯೋಜನೆಯಾಗಿದೆ.
ಪಾಕ್ ವಿರುದ್ಧ ಗೆಲುವು ಕಂಡು ಒತ್ತಡ ಕಡಿಮೆಗೊಳಿಸಿರುವ ಟೀಮ್ ಇಂಡಿಯಾ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಕಡೆಗಣಿಸಿ ಮೈಮರೆಯುವಂತಿಲ್ಲ. ಕಳೆದ ಆವೃತ್ತಿಯಲ್ಲಿ ನಾಕೌಟ್ ಹಂತಕ್ಕೇರಲು ವಿಫಲವಾಗಿದ್ದ ಭಾರತ ತಂಡಕ್ಕೆ ಈ ಬಾರಿ ಸೆಮಿಫೈನಲ್ ರೇಸ್ನಲ್ಲಿ ಹೆಚ್ಚಿನ ರನ್ರೇಟ್ ಪಡೆಯುವ ದೃಷ್ಟಿಯಿಂದ ಈ ಪಂದ್ಯಲ್ಲಿ ದೊಡ್ಡ ಅಂತರದ ಗೆಲುವು ಅಗತ್ಯವಾಗಿದೆ. ಇನ್ನೊಂದೆಡೆ ಪಂದ್ಯಕ್ಕೆ ಮಳೆ ಭೀತಿಯೂ ಕಾಡುತ್ತಿದ್ದು ಲೆಕ್ಕಾಚಾರವೂ ತಲೆಕೆಳಗಾಗುವ ಆತಂಕವೂ ಇದ್ದೇ ಇದೆ. ಆದ್ದರಿಂದ ಪ್ರತಿ ಪಂದ್ಯದಲ್ಲಿಯೂ ಎಚ್ಚರ ಅತ್ಯಗತ್ಯ. ಜತೆಗೆ ದುರ್ಬಲ ಎದುರಾಳಿಯೆಂದು ತಂಡದಲ್ಲಿ ಪ್ರಯೋಗ ನಡೆಸಲು ಮುಂದಾಗಬಾರದು.
ರಾಹುಲ್-ರೋಹಿತ್ ಬ್ಯಾಟಿಂಗ್ ಚಿಂತೆ
ಕನ್ನಡಿಗ ಕೆ.ಎಲ್. ರಾಹುಲ್ ಕಳೆದ ಪಾಕಿಸ್ತಾನ ವಿರುದ್ಧ ಸಂಪೂರ್ಣ ವಿಫಲಗೊಂಡಿದ್ದರು. ಜತೆಗೆ ತವರಿನ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅರ್ಧಶತಕ ಬಾರಿಸಿದ್ದರೂ ಸ್ಟ್ರೈಕ್ರೇಟ್ ತೀರಾ ಕಳಪೆ ಮಟ್ಟದಿಂದ ಕೂಡಿದೆ. ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಡುತ್ತಿರುವ ರಾಹುಲ್ ಕೊನೆಗೆ ಪರದಾಡಿ ವಿಕೆಟ್ ಒಪ್ಪಿಸುತ್ತಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಜತೆಗೆ ನಾಯಕ ರೋಹಿತ್ ಶರ್ಮಾ ಕೂಡ ರನ್ ಬರ ಎದುರಿಸುತ್ತಿದ್ದಾರೆ. ಈ ಜೋಡಿ ಕಳೆದ ಕೆಲ ಸರಣಿಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಇನಿಂಗ್ಸ್ ಕಟ್ಟಿಲ್ಲ. ಈ ಪಂದ್ಯದಲ್ಲಾದರೂ ಬ್ಯಾಟಿಂಗ್ ಫಾರ್ಮ್ಗೆ ಮರಳಿ ಈ ಜೋಡಿ ತಂಡಕ್ಕೆ ಉತ್ತಮ ಆರಂಭ ಒದಗಿಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಬೇಕಿದೆ.
ಬೌಲಿಂಗ್ ಬಲಿಷ್ಠ
ಭಾರತದ ಬೌಲಿಂಗ್ ಬಲಿಷ್ಠವಾಗಿದೆ. ಇದನ್ನು ಕಳೆದ ಪಾಕ್ ವಿರುದ್ಧದ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್ ಪಂದ್ಯದ ಆರಂಭಿಕ ಓವರ್ನಲ್ಲಿಯೇ ಎದುರಾಳಿಗೆ ನಡುಕ ಹುಟ್ಟಿಸುವಲ್ಲಿ ಸಮರ್ಥರಿದ್ದಾರೆ. ಇವರಿಗೆ ಮತೋರ್ವ ಹಿರಿಯ ವೇಗಿ ಮೊಹಮ್ಮದ್ ಶಮಿ ಉತ್ತಮ ಸಾಥ್ ನೀಡುತ್ತಿದ್ದಾರೆ. ಅಚ್ಚರಿ ಎಂದರೆ ಕಿರಿಯ ವೇಗಿ ಅರ್ಶ್ದೀಪ್ ಸಿಂಗ್ ತಂಡದ ಹಿರಿಯ ವೇಗಿಗಳಿಗೆ ಸವಾಲೊಡ್ಡಿದಂತೆ ವಿಕೆಟ್ ಕೀಳುತ್ತಿದ್ದಾರೆ. ಇದಕ್ಕೆ ಪಾಕ್ ವಿರುದ್ಧದ ಪ್ರದರ್ಶನವೇ ಉತ್ತಮ ನಿದರ್ಶನ. ಮೊದಲ ಎಸೆತದಲ್ಲೇ ವಿಕೆಟ್ ಭಾರತಕ್ಕೆ ಮುನ್ನಡೆ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಈ ಪಂದ್ಯದಲ್ಲೂ ಅರ್ಶ್ದೀಪ್ ಬೌಲಿಂಗ್ ಮೇಲೆ ತಂಡ ನಿರೀಕ್ಷೆ ಇರಿಸಿದೆ.
ನೆದರ್ಲೆಂಡ್ಸ್ ಸಾಮಾನ್ಯ ತಂಡ
ಭಾರತ ತಂಡಕ್ಕೆ ಹೋಲಿಸಿದರೆ ನೆದರ್ಲೆಂಡ್ಸ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಸಾಮಾನ್ಯ ಮಟ್ಟದಿಂದ ಗೋಚರಿಸಿದೆ. ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರು ಇಲ್ಲಿ ಕಾಣಿಸುತ್ತಿಲ್ಲ. ಆದರೂ ಇವರ ಸವಾಲನ್ನು ಭಾರತ ಕಡೆಗಣಿಸುವಂತ್ತಿಲ್ಲ.
ಇದನ್ನೂ ಓದಿ | T20 World Cup | ನ್ಯೂಜಿಲೆಂಡ್- ಅಫಘಾನಿಸ್ತಾನ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಕ್ಕೂ ಅಂಕ ಹಂಚಿಕೆ