Site icon Vistara News

T20 World Cup | ಮಳೆ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಐರ್ಲೆಂಡ್​; ಇಂಗ್ಲೆಂಡ್ ವಿರುದ್ಧ 5 ರನ್ ಜಯ

t20

ಮೆಲ್ಬೋರ್ನ್​: ಟಿ20 ವಿಶ್ವ ಕಪ್ (T20 World Cup) ಸೂಪರ್ 12 ಸುತ್ತಿನ ಇಂಗ್ಲೆಂಡ್ ಹಾಗೂ ಐರ್ಲೆಂಡ್ (Ireland ವಿರುದ್ಧದ ಬುಧವಾರದ ಪಂದ್ಯ ರೋಚಕ ಪಲಿತಾಂಶದೊಂದಿಗೆ ಅಂತ್ಯಗೊಂಡಿದೆ. ಮಳೆ ಪೀಡಿತ ಈ ಪಂದ್ಯದಲ್ಲಿ ಡಕ್​ ವರ್ತ್ ನಿಯಮದಡಿಯಲ್ಲಿ ಐರ್ಲೆಂಡ್ 5 ರನ್​ಗಳಿಂದ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 19. 5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 14.3 ಓವರ್​ಗಳಲ್ಲಿ 5 ವಿಕೆಟ್​ಗೆ 105 ರನ್ ಗಳಿಸಿ ಗೆಲುವಿನ ಕಡೆ ಮುಖಮಾಡಿತ್ತು. ಈ ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ನಿರಂತರವಾಗಿ ಮಳೆ ಸುರಿಯಲಾರಂಭಿಸಿದ ಕಾರಣ ಅಂತಿಮವಾಗಿ ಡಕ್​ ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇತ್ತ ಇಂಗ್ಲೆಂಡ್​ ತಂಡದ ಗೆಲುವಿಗೆ ಮಳೆ ತಣ್ಣೀರೆರಚಿತು.

ಚೇಸಿಂಗ್​ ವೇಳೆ ಇಂಗ್ಲೆಂಡ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಜೋಸ್‌ ಬಟ್ಲರ್‌ ತಂಡದ ಖಾತೆ ತೆರೆಯುವ ಮುನ್ನವೇ ವಿಕೆಟ್​ ಒಪ್ಪಿಸಿ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲೇ ಅಲೆಕ್ಸ್‌ ಹೇಲ್ಸ್‌(7), ಬೆನ್‌ ಸ್ಟೋಕ್ಸ್‌(6)ಕೂಡ ವಿಕೆಟ್‌ ಒಪ್ಪಿಸಿದರು. ಡೇವಿಡ್​ ಮಲಾನ್ 37 ಎಸೆತದಿಂದ​ 35 ರನ್​ ಗಳಿಸಿ ತಕ್ಕ ಮಟ್ಟಿನ ಪ್ರದರ್ಶನ ನೀಡಿದರು. ಆದರೆ ಮೊಯಿನ್​ ಅಲಿ 24 ಮತ್ತು ಲಿವಿಂಗ್​ಸ್ಟನ್​ 1 ರನ್​ ಗಳಿಸಿ ತಂಡಕ್ಕೆ ಆಸರೆಯಾದ ವೇಳೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಮೊದಲು ಬ್ಯಾಟಿಂಗ್​ ನಡೆಸಿದ ಐರ್ಲೆಂಡ್​ ತಂಡಕ್ಕೆ ನಾಯಕ ಆಂಡ್ರೆ ಬಾಲ್ಬಿರ್ನಿ ಮತ್ತು ಲಾರ್ಕನ್‌ ಟಕ್ಕರ್‌ ಜೋಡಿ 82 ರನ್‌ ನಿರ್ಣಾಯಕ ಜತೆಯಾಟದ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಇಂಗ್ಲೆಂಡ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ನಾಯಕ ಆಂಡ್ರೆ ಬಾಲ್ಬಿರ್ನಿ 47 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 4 ಬೌಂಡರಿಯೊಂದಿಗೆ 62 ರನ್‌ ಸಿಡಿಸಿದರು. ಟಕ್ಕರ್​ 27 ಎಸೆತದಿಂದ 34 ರನ್​ ಗಳಿಸಿದರು.

ಸ್ಕೋರ್‌ ವಿವರ

ಐರ್ಲೆಂಡ್‌: 19. 2 ಓವರ್‌ಗಳಿಗೆ 157-10 (ಆಂಡ್ರೆ ಬಾಲ್ಬಿರ್ನಿ 62, ಲಾರ್ಕನ್‌ ಟಕ್ಕರ್‌ 34; ಮಾರ್ಕ್‌ ವುಡ್‌ 34ಕ್ಕೆ 3, ಲಿಯಾಮ್‌ ಲಿವಿಂಗ್‌ಸ್ಟನ್ 17ಕ್ಕೆ 3)

ಇಂಗ್ಲೆಂಡ್‌: 14.3 ಓವರ್‌ಗಳಿಗೆ 105-5 (ಡೇವಿಡ್​ ಮಲಾನ್‌ 35, ಮೊಯೀನ್‌ ಅಲಿ 25*; ಜೋಶ್‌ ಲಿಟ್ಲ್‌ 16ಕ್ಕೆ 2, ಫಿಯಾನ್‌ ಹ್ಯಾಂಡ್‌ 17ಕ್ಕೆ 1) ಪಂದ್ಯಶ್ರೇಷ್ಠ: ಆಂಡ್ರೆ ಬಾಲ್ಬಿರ್ನಿ

ಇದನ್ನೂ ಓದಿ | T20 World Cup | ಹಾರ್ದಿಕ್​ ಪಾಂಡ್ಯಗೆ ಗಾಯ, ಮುಂದಿನ ಪಂದ್ಯಕ್ಕೆ ಅನುಮಾನ?

Exit mobile version