ಮುಂಬಯಿ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಟೂರ್ನಿಯ ಪಂದ್ಯಾವಳಿಗಾಗಿ ಟೀಮ್ ಇಂಡಿಯಾದ 15 ಸದಸ್ಯರ ತಂಡ ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಬಿಸಿಸಿಐ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.
ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್, ರಿಂಕು ಸಿಂಗ್ ಆಯ್ಕೆಯಾಗುವುದು ಬಹುತೇಕ ಖಚಿತ. ಸದ್ಯಕ್ಕೆ
ಆರಂಭಿಕ ಸ್ಥಾನಕ್ಕೆ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಆಲ್ರೌಂಡರ್ ಕೋಟಾದಲ್ಲಿ ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ತೀವ್ರ ಪೈಪೋಟಿ ಇದೆ.
ರಿಷಭ್ ಪಂತ್ ಅವರು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, 2ನೇ ಕೀಪರ್ ಆಯ್ಕೆಗೆ ಒಟ್ಟು 4 ಮಂದಿ ಆಟಗಾರರ ನಡುವೆ ತೀವ್ರ ಸ್ಪರ್ಧೆ ಇದೆ. ರಾಹುಲ್, ಜಿತೇಶ್ ಶರ್ಮ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇರಲ್ಲಿ ಒಬ್ಬರು ಆಯ್ಕೆಯಾಗಬಹುದು. ಈ ಬಾರಿಯ ಐಪಿಎಲ್‌ನಲ್ಲಿ ಶರವೇಗದ ಎಸೆತಗಳ ಮೂಲಕ ಭಾರೀ ಸಂಚಲನ ಮೂಡಿಸಿದ ಲಕ್ನೋ ತಂಡದ ಮಾಯಾಂಕ್ ಯಾದವ್ ಮತ್ತು ಹರ್ಷಿತ್ ರಾಣಾ ಮೀಸಲು ಬೌಲರ್ಗಳಾಗಿ ತಂಡದೊಂದಿಗೆ ಪ್ರಯಾಣಿಸಬಹುದು. ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ಗೆ ಸ್ಥಾನ ಸಿಗುವುದು ಬಹುತೇಕ ಡೌಟ್ ಎನ್ನಲಾಗಿದೆ.
ಇದನ್ನೂ ಓದಿ T20 World Cup: ಟಿ20 ವಿಶ್ವಕಪ್ನಲ್ಲಿ ರೋಹಿತ್ ಜತೆ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕೆ
ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದರೆ ಮಾತ್ರ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ತಿಳಿಸಿರುವದಾಗಿ ದೈನಿಕ್ ಜಾಗರಣ್ ತನ್ನ ವರದಿಯಲ್ಲಿ ತಿಳಿಸಿತ್ತು. ಜತೆಗೆ ಈಗಾಗಲೇ ಪಾಂಡಗೆ ಈ ವಿಚಾರವಾಗಿ ಬಿಸಿಸಿಐ ಸೂಚನೆಯನ್ನು ಕೂಡ ನೀಡಿದೆ ಎಂದು ತಿಳಿಸಿತ್ತು.
ಈಗಾಗಲೇ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್ 9 ರಂದು ಪಾಕ್ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿದೆ. ಇದೇ ಕಾರಣದಿಂದ ಆಯ್ಕೆ ಸಮಿತಿಯು ಭಾರತದ ಮೊದಲ ಸಂಭಾವ್ಯ ತಂಡವನ್ನು ಎಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.