ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವ ಕಪ್(T20 World Cup)ನ ಸಾಮ್ರಾಟನಾಗಿ ಇಂಗ್ಲೆಂಡ್ ತಂಡ ಹೊರಹೊಮ್ಮಿದೆ. ತಂಡವನ್ನು ಗೆಲ್ಲಿಸಿದ ನಾಯಕ ಜೋಸ್ ಬಟ್ಲರ್ಗೆ ಎಲ್ಲಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಇಲ್ಲಿ ಇದಕ್ಕಿಂತ ವಿಶೇಷವೆಂದರೆ ಧೋನಿ ಬಳಿಕ ಯಾರು ಮಾಡದ ಸಾಧನೆಯೊಂದನ್ನು ಬಟ್ಲರ್ ಸರಿಗಟ್ಟಿದ್ದು ಪ್ರಸ್ತುತ ಕ್ರಿಕೆಟ್ನ ಧೋನಿಯಾಗಿ ಬಟ್ಲರ್ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಹಲವು ದೃಷ್ಟಾಂತಗಳು ಸಾಕ್ಷಿಯಾಗಿವೆ. ಅವು ಈ ಕೆಳಗಿನಂತಿವೆ.
ಧೋನಿಯಂತೆ ಚೊಚ್ಚಲ ನಾಯಕತ್ವದಲ್ಲಿ ಕಪ್ ಗೆದ್ದ ಬಟ್ಲರ್
2007ರ ಏಕ ದಿನ ವಿಶ್ವ ಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ಯಶಸ್ಸು ಕಾಣದೇ ಬಳಿಕ ತಂಡದ ನಾಯಕತ್ವ ತೊರೆದಿದ್ದರು. ಆ ವೇಳೆಗಷ್ಟೇ ಚುಟುಕು ಕ್ರಿಕೆಟ್ ಉದಯವಾಗಿತ್ತು. ಆದರೆ ಭಾರತ ತಂಡವನ್ನು ಮುನ್ನಡೆಸುವ ಆಟಗಾರ ಯಾರೆಂದು ಚಿಂತನೆ ನಡೆಸುತ್ತಿದ್ದ ಆಯ್ಕೆ ಮಂಡಳಿ ಮುಂದೆ ಧೋನಿ ಹೆಸರು ಬಂದಿತ್ತು. ಅದರಂತೆ ಭಾರತ ತಂಡದ ನೂತನ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ಚುಕ್ಕಾಣಿ ಹಿಡಿದರು. ಆದರೆ ನಾಯಕತ್ವದ ಯಾವುದೇ ಅನುಭವವಿಲ್ಲದ ಅವರು ಚೊಚ್ಚಲ ನಾಯಕತ್ವದಲ್ಲೇ ಟಿ20 ವಿಶ್ವ ಕಪ್ ಎತ್ತಿ ಇತಿಹಾಸ ನಿರ್ಮಿಸಿದ್ದರು. ಇದೀಗ 2019 ಏಕ ದಿನ ವಿಶ್ವ ಕಪ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕ್ರಿಕೆಟ್ ನಿವೃತ್ತಿಯ ಬಳಿಕ ಮೊದಲ ಬಾರಿ ತಂಡವನ್ನು ಮುನ್ನಡೆಸಿದ ಬಟ್ಲರ್ ಕೂಡ ಚೊಚ್ಚಲ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಆಗಿ ಮಾಡುವ ಮೂಲಕ ಧೋನಿ ಸಾಧನೆಯನ್ನು ಸರಿಗಟಿದ್ದಾರೆ.
ಧೋನಿ ಬಳಿಕ ವಿಶ್ವಕಪ್ ಗೆದ್ದ ವಿಕೆಟ್‌ಕೀಪರ್
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ 2007ರಲ್ಲಿ ಚೊಚ್ಚಲ ಆವೃತ್ತಿಯ ಟಿ20 ವಿಶ್ವ ಕಪ್ ಗೆಲ್ಲುವ ಮೂಲಕ ಈ ಸಾಧನೆಯನ್ನು ಮಾಡಿದ್ದರು. ಆ ಬಳಿಕ ಯಾವೊಬ್ಬ ನಾಯಕನೂ ವಿಕೆಟ್‌ಕೀಪರ್ ಆಗಿ ಈ ಸಾಧನೆಯನ್ನು ಮಾಡಿರಲಿಲ್ಲ. ಇದೀಗ ಧೋನಿಯ ಬಹುದೊಡ್ಡ ಅಭಿಮಾನಿಯಾಗಿರುವ ಬಟ್ಲರ್, ಅವರಂತೆಯೇ ವಿಶೇಷ ದಾಖಲೆಯನ್ನು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಜತೆಗೆ ಬಟ್ಲರ್ ಕೂಡ ಧೋನಿಯಂತೆ ಕೂಲ್ ಕ್ಯಾಪ್ಟನ್ ಎನ್ನುವುದು ಇಲ್ಲಿ ಉಲ್ಲೇಖನಿಯ.
ಅಂದೂ ಇಂದೂ ಪಾಕಿಸ್ತಾನವೇ ಎದುರಾಳಿ
ಕಾಕತಾಳಿಯ ಎಂಬಂತೆ ಧೋನಿ ಚೊಚ್ಚಲ ನಾಯಕನಾಗಿ ಟಿ20 ವಿಶ್ವ ಕಪ್ ಗೆದ್ದಾಗಲೂ ಪಾಕಿಸ್ತಾನವೇ ಎದುರಾಳಿಯಾಗಿತ್ತು. ಇಂದು ಜೋಸ್ ಬಟ್ಲರ್ ಅವರು ನಾಯಕನಾಗಿ ಕಪ್ ಗೆಲ್ಲುವ ವೇಳೆಯೂ ಪಾಕಿಸ್ತಾನವೇ ಎದುರಾಳಿಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ. ಇದೀಗ ಧೋನಿಯಂತೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಏಕ ದಿನ ವಿಶ್ವ ಕಪ್ನಲ್ಲಿಯೂ ನಾಯಕನಾಗಿ ತಂಡವನ್ನು ಚಾಂಪಿಯನ್ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | T20 World Cup | ಇದಕ್ಕೆ ಕರ್ಮ ಎನ್ನುವುದು; ಅಖ್ತರ್‌ಗೆ ಟ್ರೋಲ್ ಮಾಡಿದ ಮೊಹಮ್ಮದ್ ಶಮಿ