ಅಡಿಲೇಡ್: ವೇಗಿ ಜೋಶುವಾ ಲಿಟಲ್ ಹ್ಯಾಟ್ರಿಕ್ ವಿಕೆಟ್ ಸಾಧನೆಯ ಹೊರತಾಗಿಯೂ ಐರ್ಲೆಂಡ್ ತಂಡ ಐಸಿಸಿ ಟಿ20 ವಿಶ್ವ ಕಪ್(T20 World Cup)ನ ಸೂಪರ್ 12 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 35 ರನ್ ಅಂತರದ ಸೋಲಿಗೆ ತುತ್ತಾಯಿತು. ಕಿವೀಸ್ ಈ ಗೆಲುವಿನೊಂದಿಗೆ ಎ ಗ್ರೂಪ್ನಿಂದ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶಿಸಿತು. ಜತೆಗೆ ಈ ಬಾರಿಯ ವಿಶ್ವ ಕಪ್ ಕೂಟದಲ್ಲಿ ಸೆಮಿಫೈನಲ್ಗೇರಿದ ಮೊದಲ ತಂಡ ಎಂಬ ಹಿರಿಮೆಗೂ ಪಾತ್ರವಾಯಿತು.
ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಶುಕ್ರವಾರದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 185 ರನ್ ಪೇರಿಸಿತು. ಬಳಿಕ ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡ ತನ್ನ ಪಾಲಿನ ಓವರ್‌ಗಳಲ್ಲಿ 9 ವಿಕೆಟ್‌ಗೆ 150 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಭರವಸೆ ಮೂಡಿಸಿದ ವಿಲಿಯಮ್ಸನ್
ಕಳೆದ ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿ ಬ್ಯಾಟಿಂಗ್ ಫಾರ್ಮ್‌ಗೆ ಮರಳಿದ್ದು 35 ಎಸೆತಗಳಲ್ಲಿ 61 ರನ್ ಗಳಿಸಿದರು. ಅವರ ಇನ್ನಿಂಗ್ನಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಯಿತು. ತಂಡ ಸೆಮಿಫೈನಲ್ಗೇರಿದ ಸಮಯದಲ್ಲೇ ನಾಯಕ ವಿಲಿಯಮ್ಸನ್ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡದ್ದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದಂತಾಗಿದೆ. ಉಳಿದಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಫಿನ್ ಅಲೆನ್ (31), ಡೆವೋನ್ ಕಾನ್ವೆ (28) ಹಾಗೂ ಡ್ಯಾರಿಲ್ ಮಿಚೆಲ್ (31) ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಕಾರಣ ತಂಡ ಬೃಹತ್ ಮೊತ್ತ ಪೇರಿಸಿತು.
ಐರ್ಲೆಂಡ್ ಪರ ಎಡಗೈ ವೇಗಿ ಜೋಶುವಾ ಲಿಟಲ್ ಡೆತ್ ಓವರ್‌ಗಳಲ್ಲಿ ನ್ಯೂಜಿಲೆಂಡ್‌ನ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಲ್ಲದೆ 19ನೇ ಓವರ್‌ನಲ್ಲಿ ಅವರು ಸತತ ಮೂರು ಎಸೆತಗಳಲ್ಲಿ ವಿಲಿಯಮ್ಸನ್, ಜಿಮ್ಮಿ ನೀಶಾಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ವಿಕೆಟ್‌ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವ ಕಪ್ ಟೂರ್ನಿಯಲ್ಲಿ ದಾಖಲಾದ ಎರಡನೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಇದಾಗಿದೆ. ಇದಕ್ಕೂ ಮುನ್ನ ಟೂರ್ನಿಯ ಮೊದಲ ಹಂತದ ಪಂದ್ಯದಲ್ಲಿ ಯುಎಇ ತಂಡದ ಕಾರ್ತಿಕ್ ಮೇಯಪ್ಪನ್ ಅವರು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಐರ್ಲೆಂಡ್ ಉತ್ತಮ ಆರಂಭ
ಗುರಿ ಬೆನ್ನಟ್ಟಿದ ಐರ್ಲೆಂಡ್‌ಗೆ ಪಾಲ್ ಸ್ಟರ್ಲಿಂಗ್(37) ಮತ್ತು ಆಂಡ್ರ್ಯೂ(30) ಉತ್ತಮ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 68 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆದರೆ ಈ ಇಬ್ಬರ ವಿಕೆಟ್ ಪತನದ ಬಳಿಕ ನಾಟಕೀಯ ಕುಸಿತ ಕಂಡ ಐರ್ಲೆಂಡ್ ಅಂತಿಮವಾಗಿ ಸೋಲು ಕಂಡಿತು. ನ್ಯೂಜಿಲೆಂಡ್ ಪರ ಲಾಕಿ ಫರ್ಗ್ಯೂಸನ್ 3, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್ ಮತ್ತು ಟಿಮ್ ಸೌಥಿ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 20 ಓವರ್‌ಗಳಿಗೆ 185-6 (ಕೇನ್ ವಿಲಿಯಮ್ಸನ್ 61, ಫಿನ್ ಆಲೆನ್ 32, ಡ್ಯಾರಿಲ್ ಮಿಚೆಲ್ 31, ಜೋಶುವಾ ಲಿಟಲ್ 22ಕ್ಕೆ 3, ಡೆರೆತ್ ಗೆಲಾನಿ 30ಕ್ಕೆ 2).
ಐರ್ಲೆಂಡ್: 20 ಓವರ್‌ಗಳಿಗೆ 150-9 (ಪಾಲ್ ಸ್ಟರ್ಲಿಂಗ್ 37, ಆಂಡ್ರೆ ಬಲ್ಬಿರ್ನಿ 30, ಜಾರ್ಜ್ ಡಾರ್ಕೆಲ್ 23, ಲಾಕಿ ಫರ್ಗ್ಯೂಸನ್ 22ಕ್ಕ 3, ಮಿಚೆಲ್ ಸ್ಯಾಂಟ್ನರ್ 26ಕ್ಕೆ 2, ಟಿಮ್ ಸೌಥೀ 29ಕ್ಕೆ 2).
ಇದನ್ನೂ ಓದಿ | Team India | ಮೆಲ್ಬೋರ್ನ್ ತಲುಪಿದ ರೋಹಿತ್ ಪಡೆ; ಶುಕ್ರವಾರದಿಂದ ಅಭ್ಯಾಸ ಆರಂಭ