ಸಿಡ್ನಿ: ರಿಲಿ ರೊಸೊ (109) ಅವರ ಸ್ಫೋಟಕ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವ ಕಪ್(T20 World Cup) ಟೂರ್ನಿಯ ಸೂಪರ್-12ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 104 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯ ‘ಬಿ’ ಗುಂಪಿನ ಅಂಕ ಪಟ್ಟಿಯಲ್ಲಿ 3 ಅಂಕಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದೆ.
ಗುರುವಾರ ಸಿಡ್ನಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಬಳಿಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 16.3 ಓವರ್ಗಳಲ್ಲಿ 101 ರನ್ಗೆ ಸರ್ವ ಪತನ ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ನಾಯಕ ತೆಂಬ ಬವುಮ(2) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಆದರೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಯುವ ಬ್ಯಾಟರ್ ರಿಲಿ ರೊಸೊ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿ ಬಾಂಗ್ಲಾದೇಶ ಬೌಲರ್‌ಗಳನ್ನು ದಂಡಿಸಿದರು. ಅದರಂತೆ ಕೇವಲ 56 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 109 ರನ್ ಗಳಿಸಿ ಶತಕ ದಾಖಲಿಸಿದರು. ಜತೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಹಾಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡರು.
ಅಷ್ಟೇ ಅಲ್ಲದೆ ಕ್ವಿಂಟನ್ ಡಿ ಕಾಕ್ ಅವರ ಜತೆ ಎರಡನೇ ವಿಕೆಟ್‌ಗೆ 168 ರನ್ ಒಟ್ಟುಗೂಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 200ರ ಗಡಿ ದಾಟಲು ನೆರವಾದರು. ರೊಸೊ ಆರ್ಭಟಿಸುವುದಕ್ಕೂ ಮುನ್ನ ಸ್ಫೋಟಕ ಬ್ಯಾಟ್ ಮಾಡಿದ್ದ ಕ್ವಿಂಟನ್ ಡಿ ಕಾಕ್ ಕೇವಲ 38 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಯೊಂದಿಗೆ 63 ರನ್ ಸಿಡಿಸಿದರು.
ಬಾಂಗ್ಲಾ ಸಂಪೂರ್ಣ ಕುಸಿತ
ಚೇಸಿಂಗ್ ವೇಳೆ ಬಾಂಗ್ಲಾದೇಶ ತಂಡದ ಬ್ಯಾಟ್ಸ್‌ಮನ್‌ಗಳು ಆನ್ರಿಚ್ ನೋರ್ಜೆ ಮಾರಕ ದಾಳಿಗೆ ತತ್ತರಿಸಿ ತರಗೆಲೆಯಂತೆ ಉದುರಿದರು. 34 ರನ್ ಗಳಿಸಿದ ಲಿಟನ್ ದಾಸ್ ಬಾಂಗ್ಲಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇನ್ನುಳಿದ ಯಾವೊಬ್ಬ ಬ್ಯಾಟ್ಸ್‌ಮನ್ ಕೂಡ 20 ರನ್ ವೈಯಕ್ತಿಕ ಮೊತ್ತ ಗಳಿಸಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆನ್ರಿಚ್ ನೋರ್ಜೆ 3.3 ಓವರ್‌ಗಳಿಗೆ ಕೇವಲ 10 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ತಬ್ರೇಝ್ ಶಾಮ್ಸಿ 3, ಕಗಿಸೊ ರಬಾಡ ಹಾಗೂ ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು.
ಸ್ಕೋರ್ ವಿವರ:
ದಕ್ಷಿಣ ಆಫ್ರಿಕಾ: 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 205 (ರಿಲಿ ರೊಸೊ 109, ಕ್ವಿಂಟನ್ ಡಿ ಕಾಕ್ 63, ಶಕಿಬ್ ಅಲ್ ಹಸನ್ 33 ಕ್ಕೆ 2).
ಬಾಂಗ್ಲಾದೇಶ: 16.3 ಓವರ್‌ಗಳಿಗೆ 101ಕ್ಕೆ ಆಲೌಟ್ (ಲಿಟನ್ ದಾಸ್ 34, ಸೌಮ್ಯ ಸರ್ಕಾರ್ 15; ಅನ್ರಿಚ್ ನೋರ್ಜೆ 10ಕ್ಕೆ 4, ತಬ್ರೇಜ್ ಶಂಸಿ 20ಕ್ಕೆ 3). ಪಂದ್ಯಶ್ರೇಷ್ಠ: ರಿಲಿ ರೊಸೊ
ಇದನ್ನೂ ಓದಿ | T20 World Cup | ಟೀಮ್ ಇಂಡಿಯಾದಲ್ಲಿ ಪಾಕಿಸ್ತಾನ ತಂಡದ ಬೌಲರ್; ಕೊಹ್ಲಿ, ರೋಹಿತ್ ಮೆಚ್ಚುಗೆ