ದುಬೈ : ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ (T20 World Cup) ಪಂದ್ಯಗಳನ್ನು ಗರಿಷ್ಠ ಪ್ರಮಾಣದಲ್ಲಿ ಡಿಜಿಟಲ್ ಮಾಧ್ಯಮಗಳ ಮೂಲಕ ವೀಕ್ಷಿಸಿದ್ದಾರೆ ಎಂಬುದಾಗಿ ಐಸಿಸಿ ಹೇಳಿದೆ. ಪಂದ್ಯಗಳು, ಡ್ರೆಸಿಂಗ್ ರೂಮ್ ವಿಡಿಯೊಗಳು, ಸಣ್ಣ ಪುಟ್ಟ ಸಂದರ್ಶನಗಳು ಸೇರಿದಂತೆ ಐಸಿಸಿ ಬಿಡುಗಡೆ ಮಾಡಿರುವ ವಿಡಿಯೊಗಳು ಜಾಗತಿಕವಾಗಿ 650 ಕೋಟಿ ಬಾರಿ ವೀಕ್ಷಣೆಯಾಗಿದೆ ಎಂದು ಹೇಳಿದೆ. 2021ರ ಆವೃತ್ತಿಗೆ ಹೋಲಿಕೆ ಮಾಡಿದರೆ ಇದು ಶೇಕಡಾ 65ರಷ್ಟು ಹೆಚ್ಚಳ ಎಂದು ಹೇಳಲಾಗಿದೆ.
ಇದೇ ವೇಳೆ ಟಿವಿಯಲ್ಲಿ ಪಂದ್ಯಗಳ ವೀಕ್ಷಣೆಯ ಪ್ರಮಾಣವೂ ಅಧಿಕವಾಗಿದೆ ಎಂದು ಐಸಿಸಿ ತಿಳಿಸಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಎಂಬುದನ್ನು ತಿಳಿಸಿಲ್ಲ. ಆದರೆ, ಆತಿಥ್ಯ ಪಡೆದಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವೀಕ್ಷಣೆಯಾಗಿದೆ ಎಂದು ಹೇಳಿದೆ. ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಹಿನ್ನೆಲೆಯಲ್ಲಿ ಆ ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡಿದ್ದಾರೆ ಎಂದು ಹೇಳಿದೆ.
ವೆಬ್ ಮತ್ತು ಆಪ್ ಮೂಲಕ ಒಟ್ಟಾರೆ 7,8 ಕೋಟಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ವಿಡಿಯೊಗಳನ್ನು ವೀಕ್ಷಣೆ ಮಾಡಿದ್ದಾರೆ ಎಂಬುದಾಗಿ ಐಸಿಸಿ ಹೇಳಿದೆ. ಕಳೆದ ಆವೃತ್ತಿಗೆ ಹೋಲಿಕೆ ಮಾಡಿದರೆ ಇಲ್ಲಿ ಶೇಕಡಾ 57ರಷ್ಟು ಪ್ರಗತಿಯಾಗಿದೆ ಎಂದು ಹೇಳಿದೆ.
ಐಸಿಸಿಯು ಡಿಜಿಟಲ್ ಪ್ರಸಾರಕ್ಕಾಗಿ ಫೇಸ್‌ಬುಕ್ ಮಾಲೀಕತ್ವ ಹೊಂದಿರುವ ಮೆಟಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿತ್ತು. ಈ ಸಂಸ್ಥೆಗೆ ಸೇರಿದ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಮೂಲಕ 610 ಕೋಟಿ ವೀಕ್ಷಣೆಯಾಗಿವೆ. ಇದು 2021ರ ಆವೃತ್ತಿಗೆ ಹೋಲಿಕೆ ಮಾಡಿದರೆ ಶೇಕಡಾ 50ರಷ್ಟು ಹೆಚ್ಚಳ ಎಂಬುದಾಗಿ ಐಸಿಸಿ ತಿಳಿಸಿದ್ದಾರೆ.
ಇದನ್ನೂ ಓದಿ | Icc Ranking | ಐಸಿಸಿ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನ ಏರಿಕೆ ಕಂಡ ಇಶಾನ್ ಕಿಶನ್!