ಅಡಿಲೇಡ್: ಐಸಿಸಿ ಟಿ20 ವಿಶ್ವ ಕಪ್(T20 World Cup )ನಲ್ಲಿ ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಗ್ರೂಪ್ 2ರ ಸೂಪರ್-12 ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿದೆ. ಅಡಿಲೆಡ್ನ ಓವಲ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 13 ರನ್ಗಳ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾದ ಸೋಲಿನಿಂದ ಭಾರತ ತಂಡ ಜಿಂಬಾಬ್ವೆ ವಿರುದ್ಧ ಆಡುವ ಮೊದಲೇ ಸೆಮಿಫೈನಲ್ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ಈ ಸೋಲಿನಿಂದ ಬಹುತೇಕ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.
ಅಡಿಲೇಡ್ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 158 ರನ್ ಗಳಿಸಿತು. ಸುಲಭ ಮೊತ್ತದ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ತನ್ನ ಪಾಲಿನ ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಶರಣಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿತು. ಆರಂಭಿಕರಾದ ಮೈಬರ್ಗ್ ಹಾಗೂ ಮ್ಯಾಕ್ಸ್ ಒ’ಡಾವ್ಡ್(29) ಅರ್ಧಶತಕದ ಜತೆಯಾಟ ಆಡಿದರು. ಮೈಬರ್ಗ್ 30 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಟಾಮ್ ಕೂಪರ್ ಸ್ಫೋಟಕ ಆಟವಾಡಿ 19 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ 35 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಮನಬಂದಂತೆ ಬ್ಯಾಟ್ ಬೀಸಿದ ಕಾಲಿನ್ ಅಕೆರ್ಮನ್ ಕೇವಲ 26 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಆಫ್ರಿಕಾ ಪರ ಕೇಶವ್ ಮಹರಾಜ್ 2 ಹಾಗೂ ಅನ್ರಿಚ್ ನೋರ್ಜೆ 1 ವಿಕೆಟ್ ಉರುಳಿಸಿದರು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ (13) ಮತ್ತು ನಾಯಕ ತೆಂಬಾ ಬವುಮಾ (20) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ರಿಲೀ ರೊಸೊ ಕೂಡ 25 ರನ್ ಬಾರಿಸಿ ಔಟಾದರು. ನಂತರ ಬಂದ ಬ್ಯಾಟರ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆ್ಯಡಂ ಮಾರ್ಕ್ರಮ್(17) ಹಾಗೂ ಡೇವಿಡ್ ಮಿಲ್ಲರ್(17) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ನೆದರ್ಲೆಂಡ್ಸ್ ಪರ ಬ್ರಾಂಡನ್ ಗ್ಲೋವರ್ 3, ಫ್ರೆಡ್ ಕ್ಲಾಸೆನ್ 2 ವಿಕೆಟ್ ಕಿತ್ತು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ನೆದರ್ಲೆಂಡ್ಸ್: 20 ಓವರ್ಗಳಲ್ಲಿ 4 ವಿಕೆಟ್ಗೆ 158(ಕಾಲಿನ್ ಅಕೆರ್ಮನ್ ಅಜೇಯ 41, ಟಾಮ್ ಕೂಪರ್ 35, ಕೇಶವ್ ಮಹರಾಜ್ 27ಕ್ಕೆ 2).
ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 8 ವಿಕೆಟ್ಗೆ 145(ರಿಲೀ ರೊಸೊ 25, ತೆಂಬ ಬವುಮಾ 20, ಬ್ರಾಂಡನ್ ಗ್ಲೋವರ್ 9ಕ್ಕೆ 3, ಫ್ರೆಡ್ ಕ್ಲಾಸೆನ್ 20ಕ್ಕೆ 2)
ಇದನ್ನೂ ಓದಿ | IND VS ZIM | ಭಾರತ ಮತ್ತು ಜಿಂಬಾಬ್ವೆ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?