Site icon Vistara News

T20 World Cup | ಈ ಆಟಗಾರರಿಗೆ ಇದು ಕೊನೆಯ ಟಿ20 ವಿಶ್ವ ಕಪ್​ ಸಾಧ್ಯತೆ, ಯಾರೆಲ್ಲ ಅವರು?

t 20

ಮೆಲ್ಬೋರ್ನ್​: ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್​ಗೆ (T20 World Cup) ಕ್ಷಣಗಣನೆ ಆರಂಭವಾಗಿದ್ದು ಅಕ್ಟೋಬರ್​ 16ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದೆ. ಅದರಂತೆ ಕೆಲ ಆಟಗಾರರಿಗೆ ಈ ಬಾರಿಯ ವಿಶ್ವ ಕಪ್​ ಕೊನೆಯ ಟೂರ್ನಿಯಾಗುವ ಸಾಧ್ಯತೆ ಇದೆ. ಈ ಸಾಲಿನಲ್ಲಿರುವ ಆಟಗಾರ ಸಂಭಾವ್ಯ ಪಟ್ಟಿಯೊಂದನ್ನು ರಚಿಸಲಾಗಿದ್ದು ಅವರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.


ಮೊಹಮ್ಮದ್ ನಬಿ

ಅಫಘಾನಿಸ್ತಾನದ 37 ವರ್ಷದ ಆಟಗಾರ ಮೊಹಮ್ಮದ್ ನಬಿ ಈ ವಿಶ್ವ ಕಪ್​ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತರಾಗಬಹುದು. ಆದರೆ ಮುಂದಿನ ವರ್ಷ ನಡೆಯಲಿರುವ ಏಕ ದಿನ ವಿಶ್ವ ಕಪ್​ ಆಡುವ ಸಾಧ್ಯತೆ ಇದೆ. ನಾಯಕ ನಬಿ ಇದುವರೆಗೆ ಒಟ್ಟು 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆಲ್‌ರೌಂಡರ್ ನಬಿ 140.05 ಸ್ಟ್ರೈಕ್ ರೇಟ್‌ನಲ್ಲಿ 1647 ರನ್, ಮತ್ತು 7.31ರ ಎಕಾನಮಿಯಲ್ಲಿ 83 ವಿಕೆಟ್‌ಗಳನ್ನು ಪಡೆದಿದ್ದಾರೆ. ನಬಿ ಪ್ರಸ್ತುತ ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.

ಆರೋನ್ ಫಿಂಚ್

ಆಸ್ಟ್ರೇಲಿಯಾದ 35 ವರ್ಷದ ಆರೋನ್ ಫಿಂಚ್ ಈಗಾಗಲೇ ಏಕ ದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದೀಗ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವ ಕಪ್​ ಬಳಿಕ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಅದರಂತೆ ತವರಿನ ಅಭಿಮಾನಿಗಳ ಮುಂದೆ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ಗುಡ್​ಬೈ ಹೇಳುವ ಅವಕಾಶ ಅವರ ಮುಂದಿದೆ. ದುಬೈನಲ್ಲಿ ನಡೆದ ಕಳೆದ ಟಿ20 ವಿಶ್ವ ಕಪ್​ನಲ್ಲಿ ತಂಡವನ್ನು ಚಾಂಪಿಯನ್​ ಮಾಡಿದ್ದು ಫಿಂಚ್​ ಹೆಗ್ಗಳಿಕೆ. ಫಿಂಚ್​ ಟಿ 20 ಸಾಧನೆ: ಪಂದ್ಯ- 100. ರನ್- 3013. ಶತಕ: 2. ಗರಿಷ್ಠ: 172

ಡೇವಿಡ್ ವಾರ್ನರ್

ಆರೋನ್‌ ಫಿಂಚ್ ಜತೆಗಾರ ಡೇವಿಡ್ ವಾರ್ನರ್ ಕೂಡ 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ವಾರ್ನರ್ ಯುವಕರಿಗೆ ಅವಕಾಶಗಳನ್ನು ನೀಡಲು T20 ಸ್ವರೂಪದಿಂದ ನಿವೃತ್ತಿ ಹೊಂದಬಹುದು. ವಾರ್ನರ್ 2009ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ಹೀಗಾಗಿ ಈ ಬಾರಿಯ ವಿಶ್ವ ಕಪ್​ ಬಳಿಕ ಅವರು ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೊಂದಬಹುದು. ಟಿ 20ಯಲ್ಲಿ ವಾರ್ನರ್​ ಸಾಧನೆ: 95 ಪಂದ್ಯ. 2850 ರನ್​. ಒಂದು ಶತಕ ಮತ್ತು 24 ಅರ್ಧ ಶತಕ ಬಾರಿಸಿದ್ದಾರೆ.


ಟಿಮ್ ಸೌಥಿ

ಕಳೆದ ಕೆಲವು ವರ್ಷಗಳಿಂದ ನ್ಯೂಜಿಲ್ಯಾಂಡ್​ ಪರ ಆಡುತ್ತಿರುವ ಹಿರಿಯ ವೇಗಿ ಟಿಮ್ ಸೌಥಿ 2008ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 33 ವರ್ಷದ ಸೌಥಿ ಅತ್ಯುತ್ತಮ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. 95 ಪಂದ್ಯಗಳಲ್ಲಿ 114 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಮುಂದಿನ ವರ್ಷ ನಡೆಯಲಿರುವ ಏಕ ದಿನ ವಿಶ್ವ ಕಪ್​ಗೆ ಹೆಚ್ಚಿನ ಗಮನ ಹರಿಸುವ ನಿಟ್ಟಿನಲ್ಲಿ ಟಿ20 ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.

ಶಕೀಬ್ ಅಲ್ ಹಸನ್

ಬಾಂಗ್ಲಾದೇಶದ ಹಿರಿಯ ಆಲ್​ರೌಂಡ್​ ಕ್ರಿಕೆಟಿಗ ಶಕೀಬ್ ಅಲ್ ಹಸನ್​ ಪ್ರಸ್ತುತ ಕ್ರಿಕೆಟ್​ನಲ್ಲಿ ಅತ್ಯಂತ ಶ್ರೇಷ್ಠ ಆಲ್​ರೌಂಡ್ ಆಟಗಾರ. ಅವರು ಈ ವರೆಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 2000 ರನ್ ಗಳಿಸಿದ್ದಾರೆ ಮತ್ತು 100 ವಿಕೆಟ್ ಪಡೆದಿದ್ದಾರೆ. 35ರ ಹರೆಯದ ಶಕಿಬ್​ ಮುಂಬರುವ ಏಕ ದಿನ ವಿಶ್ವ ಕಪ್​ಗೆ ಗಮನ ಹರಿಸುವ ನಿಟ್ಟಿನಲ್ಲಿ ಈ ಬಾರಿಯ ಟಿ20 ವಿಶ್ವ ಕಪ್​ ಬಳಿಕ 20 ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.


ಮಾರ್ಟಿನ್ ಗಪ್ಟಿಲ್:

7 ಬಾರಿ ಟಿ20 ವಿಶ್ವ ಕಪ್​ ಆಡಿದ ಏಕೈಕ ಆಟಗಾರ ಎನಿಸಿಕೊಂಡಿರುವ ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಆಟಗಾರ ಮಾರ್ಟಿನ್​ ಗಪ್ಟಿಲ್​ ಈ ಬಾರಿ ವಿದಾಯ ಹೇಳುವುದರಲ್ಲಿ ಅನುಮಾನವೇ ಇಲ್ಲದಂತಾಗಿದೆ. 36 ವರ್ಷದ ಮಾರ್ಟಿನ್ ಗಪ್ಟಿಲ್ ಟಿ20 ಮಾದರಿಯಲ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್​ಮನ್​. ಅವರು 121 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 135.80 ಸ್ಟ್ರೈಕ್ ರೇಟ್‌ನಲ್ಲಿ 3497 ರನ್ ಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಫಾರ್ಮ್ ಸಮಸ್ಯೆ ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಗಮನಹರಿಸಲು ಗಪ್ಟಿಲ್ ಟಿ20ಯಿಂದ ನಿವೃತ್ತಿ ಹೊಂದುವ ಸಾಧ್ಯತೆ ಹೆಚ್ಚಿದೆ.

ರವಿಚಂದ್ರನ್ ಅಶ್ವಿನ್

ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ 36 ವರ್ಷ. ಅಶ್ವಿನ್ ಭಾರತಕ್ಕಾಗಿ 59 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು 6.80ರ ಎಕಾನಮಿಯಲ್ಲಿ 66 ವಿಕೆಟ್​ ಪಡೆದಿದ್ದಾರೆ. ಈಗಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದರೂ ಆಡುವ ಬಳಗದಲ್ಲಿ ಅವಕಾಶ ಅಷ್ಟಕ್ಕಷ್ಟೆ ಆದ್ದರಿಂದ ಯುವ ಆಟಗಾರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಟಿ20 ಸ್ವರೂಪಕ್ಕೆ ವಿದಾಯ ಹೇಳಿ ಟೆಸ್ಟ್ ಕ್ರಿಕೆಟ್​ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ | ICC Ranking | ದಕ್ಷಿಣ ಆಫ್ರಿಕಾದ ಆಟಗಾರನನ್ನೂ ಓವರ್‌ಟೇಕ್‌ ಮಾಡಿದ ಸೂರ್ಯಕುಮಾರ್‌ ಯಾದವ್‌

Exit mobile version