Site icon Vistara News

ಟಿ20 ವಿಶ್ವಕಪ್​ ಪಂದ್ಯದ ಟಿಕೆಟ್​ ಮಾರಾಟ ಆರಂಭ; ಭಾರತ-ಪಾಕ್​ ಪಂದ್ಯದ ಬೆಲೆ ಎಷ್ಟು?

IND vs PAK

ದುಬೈ: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​(T20 World Cup 2024) ಟೂರ್ನಿ ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಕ್ರಿಕೆಟ್​ ಪ್ರೇಮಿಗಳು ಕಾದು ಕುಳಿತಿರುವ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ. ಪಂದ್ಯವಾಳಿಯ ಟಿಕೆಟ್​ಗಳ ಮಾರಾಟವನ್ನು ಐಸಿಸಿ ಈಗಾಗಲೇ ಆರಂಭಿಸಿದೆ.

ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಟಿ20 ವಿಶ್ವಕಪ್​ ಟೂರ್ನಿಯ ಟಿಕೆಟ್​ ಖರೀದಿ ಬಗ್ಗೆ ಮಾಹಿತಿ ನೀಡಿದ್ದು ಜನಸಾಮಾನ್ಯರೂ ಈ ಟಿಕೆಟ್‌ ಖರೀದಿ ಮಾಡಬಹುದಾಗಿದೆ. ಏಕೆಂದರೆ ಇದರ ಮೊತ್ತ ಕೈಗೆಟಕುವ ದರದಲ್ಲಿದೆ. ಐಸಿಸಿ ನೀಡಿದ ಟಿಕೆಟ್‌ಗಳ ಅತ್ಯಂತ ಕಡಿಮೆ ದರ 6 ಡಾಲರ್‌. ಅಂದರೆ 500 ರೂಪಾಯಿ. ಅತ್ಯಂತ ದುಬಾರಿ ಟಿಕೆಟ್ ಬೆಲೆ 25 ಡಾಲರ್(2071 ರೂಪಾಯಿ).

ಎಲ್ಲಿ ಲಭ್ಯ


ಪಂದ್ಯಗಳ ಟಿಕೆಟ್​ ಖರೀದಿಗೆ t20worldcup.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಐಡಿಯಿಂದ ಪಂದ್ಯದಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಾಗಿದೆ. ಬ್ಲ್ಯಾಕ್​ ಟಿಕೆಟ್​ ಮಾರಾಟ ದಂಧೆಯನ್ನು ತಡೆಯುವ ನಿಟ್ಟಿನಲ್ಲಿ ಒಬ್ಬ ವ್ಯಕ್ತಿಗೆ 6 ಟಿಕೆಟ್​ ಮಾತ್ರ ಖರೀದಿಯ ಅವಕಾಶ ನೀಡಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆಯುವ ಪಂದ್ಯದ ಟಿಕೆಟ್​ ದರ ಉಳಿದ ಪಂದ್ಯಕ್ಕಿಂತ ಕೊಂಚ ಅಧಿಕವಾಗಿದೆ. ಈ ಪಂದ್ಯ ವೀಕ್ಷಣೆ ಮಾಡಬೇಕಿದ್ದರೆ 175 ಡಾಲರ್‌ ಪಾವತಿಸಬೇಕು. ಭಾರತೀಯ ಮೌಲ್ಯ ಸುಮಾರು 14,450 ರೂಪಾಯಿ. ಸ್ಟ್ಯಾಂಡರ್ಡ್ ಪ್ಲಸ್‌ಗೆ ಇನ್ನೂ ಹೆಚ್ಚಿನ ಹಣವನ್ನು ಪಾವತಿಸಬೇಕು. ಈ ಪಂದ್ಯದ ದುಬಾರಿ ಟಿಕೆಟ್‌ ಬೆಲೆ 33,000 ರೂಪಾಯಿಯಾಗಿದ್ದು, ಅದು ಸ್ಟ್ಯಾಂಡರ್ಡ್‌ ಕ್ಯಾಟಗರಿಯಲ್ಲಿ ಬರುತ್ತದೆ.

ಇದನ್ನೂ ಓದಿ T20 World Cup : ಟಿ20 ವಿಶ್ವಕಪ್ ನಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಬಹುದು?

ನ್ಯೂಯಾರ್ಕ್‌ನಲ್ಲಿ ಪಂದ್ಯ

ಇತ್ತಂಡಗಳ ನಡುವಣ ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಅಣಿಯಾಗಲಿದೆ. ಈ ಪಂದ್ಯಕ್ಕಾಗಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಪಂದ್ಯವನ್ನು ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಭಾರತದ ಬಹುತೇಕ ಲೀಗ್​ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ.

Exit mobile version