ಮುಂಬಯಿ: ಟಿ20 ವಿಶ್ವ ಕಪ್ (T20 World Cup) ಪಾಕಿಸ್ತಾನ ವಿರುದ್ಧ ಅತ್ಯಮೋಘ ಆಟವಾಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಬಗ್ಗೆ ಈಗಾಗಲೇ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಹೊಗಳಿದ್ದಾಗಿದೆ. ಈ ಸಾಲಿಗೆ ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಕೂಡ ಸೇರಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶುಕ್ರವಾರ (ಅ.28) ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ರೋಜರ್ ಬಿನ್ನಿ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಪಾಕ್ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿದ ಚೆಂಡು ಎಲ್ಲಿ ಹೋಯಿತು ಎಂದು ನೋಡುವಷ್ಟರಲ್ಲಿಯೇ ಅದು ಬೌಂಡರಿ ಗೆರೆ ದಾಟಿತ್ತು. ಇದೊಂದು ಕನಸಿನ ಹಾಗೆ ಭಾಸವಾಯಿತು. ಅದೊಂದು ಅದ್ಭುತ ಗೆಲುವಾಗಿತ್ತು. ನೀವು ಆ ರೀತಿಯ ಪಂದ್ಯವನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬಹುತೇಕ ಸಮಯ ಆ ರೀತಿಯ ಪಂದ್ಯಗಳು ಪಾಕಿಸ್ತಾನದ ಕಡೆಗೆ ವಾಲುತ್ತವೆ. ಆದರೆ ದಿಢೀರ್ ಎಂದು ಟೀಮ್ ಇಂಡಿಯಾ ಕಂಬ್ಯಾಕ್ ಮಾಡಿದ ಪರಿ ಅತ್ಯದ್ಭುತ” ಎಂದು ರೋಜರ್ ಬಿನ್ನಿ ಹೇಳಿದ್ದಾರೆ.
ಸತತ ಎರಡೂವರೆ ವರ್ಷ ಬ್ಯಾಟಿಂಗ್ ವೈಫಲ್ಯದಿಂದ ಬಳಲಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ವೇಳೆ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡರು. ಅಫಘಾನಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿದ್ದರು. ಕೊಹ್ಲಿ ಕ್ಲಾಸ್ ಪ್ಲೇಯರ್ ಮತ್ತು ಒತ್ತಡದ ಸಂದರ್ಭದಲ್ಲಿ ಮೇಲೇಳುವುದು ಅಷ್ಟು ಸುಲಭದ ಮಾತಲ್ಲ. ಈ ಕಲೆಯನ್ನು ಕೊಹ್ಲಿಯಿಂದ ನೋಡಿ ಕಲಿಯಬೇಕಿದೆ. ಆದ್ದರಿಂದ ಕೊಹ್ಲಿ ಏನನ್ನು ಸಾಬೀತುಪಡಿಸುವ ಅಗತ್ಯವಿಲ್ಲ” ಎಂದು ಬಿನ್ನಿ ತಿಳಿಸಿದರು.
ಇದನ್ನೂ ಓದಿ | T20 World Cup | ತಂಡದ ಆಯ್ಕೆ ವಿಚಾರದಲ್ಲಿ ಬಾಬರ್ ಅಜಮ್ ಜಾಣರಲ್ಲ; ವಾಸಿಂ ಅಕ್ರಂ ಆರೋಪ