ಸಿಡ್ನಿ: ಟಿ20 ವಿಶ್ವ ಕಪ್‌ನಲ್ಲಿ (T20 World Cup) ಪಾಕಿಸ್ತಾನ ತಂಡದ ಸತತ ಎರಡು ಸೋಲು ಆ ತಂಡದ ಅಭಿಮಾನಿಗಳ ಮತ್ತು ಮಾಜಿ ಕ್ರಿಕೆಟಿಗರ ನಿದ್ದೆಗೆಡಿಸಿದೆ. ಟಿ20 ವಿಶ್ವ ಕಪ್ನ ಸೆಮಿ ಫೈನಲಿಸ್ಟ್ ತಂಡಗಳಲ್ಲಿ ಒಂದು ಎಂದು ಬಿಂಬಿತವಾಗಿದ್ದ ಪಾಕ್ ತಂಡ ಸೂಪರ್-12 ಸುತ್ತಿನಿಂದಲೇ ಟೂರ್ನಿಯಿಂದ ಹೊರಬೀಳುವ ಹಂತಕ್ಕೆ ಬಂದು ನಿಂತಿದೆ. ಆದರೆ ಇದೇ ಗ್ರೂಪ್ನ ಟೀಮ್ ಇಂಡಿಯಾ ಸತತ ಎರಡು ಗೆಲುವನ್ನು ಸಾಧಿಸಿರುವುದು ಪಾಕ್ ತಂಡದ ಅಭಿಮಾನಿಗಳಿಗೆ ಸಹಿಸಿಕೊಳ್ಳಲಾಗದಂತೆ ಮಾಡಿದೆ.
ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಹೇಳಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಈ ವಾರ ಪಾಕಿಸ್ತಾನ ತಂಡ ತನ್ನ ದೇಶಕ್ಕೆ ಮರಳಲಿದೆ. ಹಾಗೆಯೇ ಮುಂದಿನ ವಾರ ಟೀಂ ಇಂಡಿಯಾ ಕೂಡ ಟಿ20 ವಿಶ್ವ ಕಪ್ನಿಂದ ಗಂಟುಮೂಟೆ ಕಟ್ಟಲಿದೆ” ಎಂದು ಅಖ್ತರ್ ಹೇಳಿದ್ದಾರೆ.
ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ ಒಂದು ರನ್‌ನಿಂದ ಸೋಲನುಭವಿಸಿತು. ಈ ಸೋಲಿನ ಬಳಿಕ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶೋಯೆಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ರೋಹಿತ್ ಪಡೆಯನ್ನು ಗುರಿಯಾಗಿರಿಸಿ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಪಾಕಿಸ್ತಾನ ತಂಡ ಈ ವಾರ, ಭಾರತ ತಂಡ ಮುಂದಿನ ವಾರ ತವರಿಗೆ ಮರಳಲಿದೆ”. ಟೀಮ್ ಇಂಡಿಯಾ ಏನು “ತೀಸ್ ಮಾರ್ ಖಾನ್” ಅಲ್ಲ. ಹೀಗಾಗಿ ಅವರೂ ಸಹ ಸೆಮಿಫೈನಲ್ನಲ್ಲಿ ಸೋತು ಮನೆಗೆ ತೆರಳಲಿದ್ದಾರೆ ಎಂದಿದ್ದಾರೆ.
ಟಿ20 ವಿಶ್ವ ಕಪ್‌ಗೆ ಪಿಸಿಬಿ ತಂಡವನ್ನು ಪ್ರಕಟಿಸಿದ ದಿನವೇ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಹೊರಗುಳಿಯಲಿದೆ ಎಂದು ಅಖ್ತರ್ ಹೇಳಿದ್ದರು. ನೀವು ಇಂತಹ ತಂಡವನ್ನು ಆಯ್ಕೆ ಮಾಡಿ, ಈ ಆಟಗಾರರೊಂದಿಗೆ ಹೋದರೆ ಆಸ್ಟ್ರೇಲಿಯಾದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ ಎಂದು ಅಖ್ತರ್ ಈ ಹಿಂದೆಯೇ ಹೇಳಿದ್ದರು. ಇದೀಗ ಅಖ್ತರ್ ಭವಿಷ್ಯ ನಿಜವಾಗುವ ಲಕ್ಷಣ ಕಾಣುತ್ತಿದೆ.
ಇದನ್ನೂ ಓದಿ | T20 World Cup | ಮಿಸ್ಟರ್ ಬೀನ್ಗಾಗಿ ಜಿಂಬಾಬ್ವೆ-ಪಾಕ್ ಪ್ರಧಾನಿಗಳ ಟ್ವಿಟರ್ ಸಮರ