ನವ ದೆಹಲಿ : 2007ರ ಟಿ20 ವಿಶ್ವ ಕಪ್ ವಿಜೇತ ಭಾರತ ತಂಡದ ವೇಗದ ಬೌಲರ್ ಜೋಗಿಂದರ್ ಶರ್ಮಾ ಎಲ್ಲ ಮಾದರಿಯ ಕ್ರಿಕೆಟ್ನಿಂದ ಶುಕ್ರವಾರ (ಫೆಬ್ರವರಿ 3ರಂದು) ನಿವೃತ್ತಿ ಪಡೆದುಕೊಂಡಿದ್ದಾರೆ. ಅವರು ಭಾರತ ತಂಡದ ಪರ 4 ಒಡಿಐ, 4 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ವಿಶ್ವ ಕಪ್ ಗೆದ್ದ ಅವಧಿಯನ್ನು ಹೊರತುಪಡಿಸಿ ಅವರು ಹೆಚ್ಚು ಅವಕಾಶಗಳನ್ನು ಪಡೆದುಕೊಂಡಿರಲಿಲ್ಲ. ಇದೀಗ ಅವರು ಬಿಸಿಸಿಐ ಜತೆಗಿನ ಒಪ್ಪಂದಕ್ಕೆ ಅಂತ್ಯ ಹಾಡಿದ್ದಾರೆ.
ಶುಕ್ರವಾರ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಅವರು ಕ್ರಿಕೆಟ್ನಿಂದ ವಿದಾಯ ಹೇಳಿದ್ದಾರೆ. ಇಂದು ನಾನು ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದೇನೆ. ಅಂತಾರಾಷ್ಟ್ರೀಯ ಹಾಗೂ ದೇಶಿಯ ಕ್ರಿಕೆಟ್ನಿಂದ ವಿಮುಖನಾಗುತ್ತಿದ್ದೇನೆ. 2002ರಿಂದ 2017ರವರೆಗಿನ ಕ್ರಿಕೆಟ್ ಆಡುವ ಅವಧಿ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣ ಎನಿಸಿಕೊಂಡಿದೆ. ಭಾರತವನ್ನು ಎಲ್ಲ ಕ್ಷೇತ್ರಗಳಲ್ಲೂ ಪ್ರತಿನಿಧಿಸಲು ಖುಷಿ ಎನಿಸುತ್ತಿದೆ ಎಂದು ಜೋಗಿಂದರ್ ಶರ್ಮಾ ಬರೆದುಕೊಂಡಿದ್ದಾರೆ.
2007ರ ಟಿ20 ವಿಶ್ವ ಕಪ್ನಲ್ಲಿ ಜೋಗಿಂದರ್ ಶರ್ಮಾ ಎಸೆದ ಇನಿಂಗ್ಸ್ನ ಕೊನೇ ಓವರ್ನಲ್ಲಿ ಭಾರತ ತಂಡ ಜಯ ಸಾಧಿಸಿತ್ತು. ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದ ಅವರು ಭಾರತ ತಂಡ ವಿಶ್ವ ಕಪ್ ಗೆಲ್ಲಲು ನೆರವಾಗಿದ್ದರು. ಆದರೆ, ಆ ಪಂದ್ಯದ ಬಳಿಕ ಅವರು ಭಾರತ ತಂಡದಲ್ಲಿ ಆಡುವ ಅವಕಾಶವನ್ನೇ ಪಡೆದಿರಲಿಲ್ಲ.
ನನಗೆ ಆಡುವ ಅವಕಾಶ ನೀಡಿದ ಬಿಸಿಸಿಐ, ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹರಿಯಾಣ ಸರಕಾರಕ್ಕೆ ಧನ್ಯವಾದಗಳು. ಅದೇ ರೀತಿ ನನ್ನ ಕ್ರಿಕೆಟ್ ವೃತ್ತಿ ಜೀವನದ ಎಲ್ಲ ಅವಧಿಯಲ್ಲಿ ನೆರವು ಕೊಟ್ಟ ಕೋಚ್ಗಳು ಹಾಗೂ ಮಾರ್ಗದರ್ಶಕರಿಗೆ ಧನ್ಯವಾದಗಳು ಎಂದು ಅವರ ಹೇಳಿದ್ದಾರೆ.
ಇದನ್ನೂ ಇದೆ : T20 World Cup | ವಿಶ್ವ ಕಪ್ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳು ಇಲ್ಲಿವೆ
ಜೋಗಿಂದರ್ ಶರ್ಮ ಕೊನೇ ಬಾರಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ನಲ್ಲಿ ಆಡಿದ್ದರು. ಅವರಿನ್ನು ಕ್ರಿಕೆಟ್ನ ಉದ್ಯಮದ ಕಡೆಗೆ ಹೊರಳುವ ಸೂಚನೆ ಕೊಟ್ಟಿದ್ದಾರೆ.