ಪರ್ತ್: ಟಿ20 ವಿಶ್ವ ಕಪ್ (T20 World Cup) ಸೂಪರ್ 12 ಸುತ್ತಿನ ಗುರುವಾರದದ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾದ ಜಿಂಬಾಬ್ವೆ ತಂಡಕ್ಕೆ ವಿಶ್ವದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಜಿಂಬಾಬ್ವೆ ದೇಶದ ಅಧ್ಯಕ್ಷರಾದ ಎಮರ್ಸನ್ ಕೂಡ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ಆದರೆ ಈ ಟ್ವೀಟ್ ಪಾಕಿಸ್ತಾನ ಪ್ರಧಾನಿಯನ್ನು ಕೆರಳಿಸುವಂತೆ ಮಾಡಿದೆ.
ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಬಳಿಕ ಟ್ವೀಟ್ ಮಾಡಿದ್ದ ಅಧ್ಯಕ್ಷ ಎಮರ್ಸನ್ ದಂಬುಡ್ಜೊ ಮ್ನಂಗಾಗ್ವಾ, ಜಿಂಬಾಬ್ವೆಗೆ ಎಂತಹ ಅದ್ಭುತ ಗೆಲುವು, ತಂಡದ ಆಟಗಾರರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಹಾಗೆಯೇ ಇದರ ಜತೆಗೆ ಪಾಕಿಸ್ತಾನದ ಕಾಲೆಳೆದಿದ್ದ ಎಮರ್ಸನ್, ಮುಂದಿನ ಬಾರಿ ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ ಎಂದು ಟ್ವೀಟ್ನಲ್ಲಿ ಸೇರಿಸಿದ್ದರು.
ಜಿಂಬಾಬ್ವೆ ಅಧ್ಯಕ್ಷರ ಈ ಟ್ವೀಟ್ ನೋಡುತ್ತಿದ್ದಂತೆ ತಕ್ಷಣ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, “ನಮ್ಮಲ್ಲಿ ನಿಜವಾದ ಮಿಸ್ಟರ್ ಬೀನ್ ಇಲ್ಲದೆ ಇರಬಹುದು, ಆದರೆ ನಮ್ಮಲ್ಲಿ ನಿಜವಾದ ಕ್ರಿಕೆಟ್ ಸ್ಪಿರಿಟ್ ಇದೆ. ಹಾಗೆಯೇ ಪಾಕಿಸ್ತಾನಿಗಳಿಗೆ ಬೌನ್ಸ್ ಬ್ಯಾಕ್ ಮಾಡುವ ಫನ್ನಿ ಹ್ಯಾಬಿಟ್ ಕೂಡ ಇದೆ” ಎಂದು ಟ್ವೀಟ್ ಮಾಡುವ ಮೂಲಕ ತೀರುಗೇಟು ನೀಡಿದ್ದಾರೆ. ಜತೆಗೆ ಜಿಂಬಾಬ್ವೆ ತಂಡದ ಆಟಕ್ಕೆ ಅಭಿನಂದನೆಗಳನ್ನು ಸಲ್ಲಿಸಿರುವ ಪಾಕ್ ಪ್ರಧಾನಿ, ಮಿಸ್ಟರ್ ಪ್ರೆಸಿಡೆಂಟ್ ನಿಮ್ಮ ತಂಡ ತುಂಬಾ ಚೆನ್ನಾಗಿ ಆಡಿದೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಪಂದ್ಯಕ್ಕೂ ಮುನ್ನವೇ ಕಾಲೆಳೆದಿದ್ದ ಅಭಿಮಾನಿ
ಪಾಕಿಸ್ತಾನ ತಂಡ ಕೇವಲ ಬಾರತ ತಂಡಕ್ಕೆ ಮಾತ್ರ ಸಾಂಪ್ರದಾಯಿಕ ಬದ್ಧ ಎದುರಾಳಿಯಲ್ಲ. ಜಿಂಬಾಬ್ವೆ ತಂಡಕ್ಕೂ ಬದ್ಧ ಎದುರಾಳಿಯಾಗಿ ಗುರುತಿಸಿಕೊಂಡಿದೆ. ಅದರಂತೆ ಪಾಕ್ ಮತ್ತು ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಇದ್ದ ಕುತೂಹಲ ಗುರುವಾರ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕಂಡು ಬಂತ್ತು. ಜಿಂಬಾಬ್ವೆ ತಂಡದ ಅಭಿಮಾನಿಯೊಬ್ಬ ಈ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ತನ್ನ ಟ್ವಿಟರ್ ಖಾತೆಯಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಕಿಡಿಕಾರಿದ್ದ.
“ಜಿಂಬಾಬ್ವೆಯ ಪ್ರಜೆಯಾಗಿ ನಾವು ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಒಮ್ಮೆ ನೀವು ನಿಜವಾದ ಮಿಸ್ಟರ್ ಬೀನ್ ಬದಲಿಗೆ ನಕಲಿ ಪಾಕ್ ಬೀನ್ ಅವರನ್ನು ನಮಗೆ ತೋರಿಸಿದ್ದೀರಿ. ನಿಮ್ಮ ಈ ಹಳೆಯ ಲೆಕ್ಕವನ್ನು ನಾಳಿನ ಪಂದ್ಯದಲ್ಲಿ ಬಡ್ಡಿ ಸಮೇತವಾಗಿ ತೀರಿಸುತ್ತೇವೆ. ಸದ್ಯಕ್ಕೆ ನೀವು ಈ ಪಂದ್ಯದಲ್ಲಿ ಸೋಲಿನಿಂದ ಪಾರಾಗಲು ಮಳೆಗಾಗಿ ಪ್ರಾರ್ಥಿಸಿ” ಎಂದು ಟ್ವೀಟ್ ಮಾಡಿದ್ದ. ಇದಕ್ಕೆ ಸರಿಯಾಗಿ ಬಾಬರ್ ಪಡೆ ಜಿಂಬಾಬ್ವೆ ವಿರುದ್ಧ ಸೋಲು ಕಂಡಿತು. ಇಲ್ಲಿಂದ ಆರಂಭವಾದ “ಫ್ರಾಡ್ ಪಾಕ್ ಮಿಸ್ಟರ್ ಬೀನ್ ” ಟ್ವೀಟ್ ಸಮರ ಉಭಯ ದೇಶದ ಪ್ರಧಾನಿಗಳ ಮಧ್ಯೆಗೂ ಬಂದು ನಿಂತಿತ್ತು.
ಜಿಂಬಾಬ್ಬೆ ಸೇಡಿಗೆ ಕಾರಣವೇನು?
ಪಾಕಿಸ್ತಾನ ವಿರುದ್ಧ ಜಿಂಬಾಬ್ವೆ ಇಷ್ಟೊಂದು ಕಿಡಿ ಕಾರಲು ಒಂದು ಕಾರಣವಿದೆ. 2016ರಲ್ಲಿ ನಡೆದಿದ್ದ ಅದೊಂದು ಘಟನೆ ಈ ಸಮರಕ್ಕೆ ಪ್ರಮುಖ ಕಾರಣ. 2016 ರಲ್ಲಿ ಜಿಂಬಾಬ್ವೆಯ ಹರಾರೆಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಪಾಕ್ ಮೂಲದ ಹಾಸ್ಯನಟರಾಗಿರುವ ಆಸಿಫ್ ಮೊಹಮ್ಮದ್ ಎಂಬುವವರು ಮಿಸ್ಟರ್ ಬೀನ್ ಹೆಸರಲ್ಲಿ ಹಾಸ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು. ಆದರೆ ಇದು ನಕಲಿ ಮಿಸ್ಟರ್ ಬೀನ್ ಎಂಬ ಸತ್ಯವರಿತ ಜಿಂಬಾಬ್ವೆ ಜನರು ಈ ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದಿದ್ದರು. ಅಲ್ಲದೆ ಈ ನಕಲಿ ಬಿನ್ ಕಾರ್ಯಕ್ರಮವನ್ನು ಆಯೋಜಿಸಲು ನಮ್ಮ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶಗೊಂಡಿದ್ದ ಜಿಂಬಾಬ್ವೆ ಜನ ಪಾಕಿಸ್ತಾನ ನಮಗೆ ವಂಚಿಸಿದೆ ಎಂದು ಆರೋಪಿಸಿದ್ದರು. ಈಗ ಪಾಕ್ ತಂಡ ಜಿಂಬಾಬ್ವೆ ಎದುರು ಸೋತಿರುವ ಈ ಸಂದರ್ಭವನ್ನು ಬಳಸಿಕೊಂಡಿರುವ ಜಿಂಬಾಬ್ವೆ ಜನತೆ ಈ ಮೋಸಕ್ಕೆ ಸೇಡು ತೀರಿಸಿಕೊಂಡಿದೆ.
ಇದನ್ನೂ ಓದಿ | T20 World Cup | ಭಾರತ-ನೆದರ್ಲೆಂಡ್ಸ್ ಪಂದ್ಯದ ವೇಳೆ ಯುವಕನ ಪ್ರೇಮ ನಿವೇದನೆ, ಒಪ್ಪಿದಳಾ ಯುವತಿ?