ದುಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಐಸಿಸಿ ನೂತನ ಟಿ20(T20 Ranking) ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕ ಪಟ್ಟಿಯನ್ನು(ICC Men’s T20I Rankings) ಪ್ರಕಟಿಸಿದೆ. ಕಳೆದ ಕೆಲವು ತಿಂಗಳಿನಿಂದ ಅಗ್ರಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್(Suryakumar Yadav) ಇದೇ ಸ್ಥಾನವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರಿ ಜಿಗಿತ ಕಂಡ ಗಿಲ್
ವಿಂಡೀಸ್ ವಿರುದ್ಧದ ಆರಂಭಿಕ ಮೂರು ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಕಳೆದ ವಾರ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದ ಶುಭಮನ್ ಗಿಲ್(Shubman Gill) ನಾಲ್ಕನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ 77 ರನ್ ಗಳಿಸಿದ ಪರಿಣಾಮ ಇದೀಗ 43 ಸ್ಥಾನಗಳ ಜಿಗಿತ ಕಂಡು ಜೀವನ ಶ್ರೇಷ್ಠ 25ನೇ ಸ್ಥಾನಕ್ಕೇರಿದ್ದಾರೆ. ವಿಂಡೀಸ್ ಸರಣಿಯಲ್ಲಿ ಗಿಲ್ ಒಟ್ಟಾರೆ 102 ರನ್ ಗಳಿಸಿದ್ದರು.
ಅಗ್ರಸ್ಥಾನ ಉಳಿಸಿಕೊಂಡ ಸೂರ್ಯ
ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಹಲವು ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಅವರು ಶ್ರೇಯಾಂಕದಲ್ಲಿ ಕುಸಿತ ಕಾಣುವ ಭೀತಿಯಲ್ಲಿದ್ದರು. ಆದರೆ ವಿಂಡೀಸ್ ವಿರುದ್ಧದ ಮೂರನೇ ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 83 ರನ್ ಚಚ್ಚಿ ತಂಡದ ಗೆಲುವುನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಟ್ಟಾರೆ ಸರಣಿಯಲ್ಲಿ 166 ರನ್ ಗಳಸಿ ಮಿಂಚಿದ್ದರು. ಹೀಗಾಗಿ ಅವರ ರೇಟಿಂಗ್ ಅಂಕದಲ್ಲಿ ಸುಧಾರಣೆ ಕಂಡು ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 907. ದ್ವಿತೀಯ ಸ್ಥಾನದಲ್ಲಿ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ಕಾಣಿಸಿಕೊಂಡಿದ್ದಾರೆ ಅವರ ರೇಟಿಂಗ್ ಅಂಕ 811. ಮೂರನೇ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಅಜಂ ಪಡೆದಿದ್ದಾರೆ.
ಕುಸಿತ ಕಂಡ ಕೊಹ್ಲಿ,ರೋಹಿತ್ ಮತ್ತು ರಾಹುಲ್
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಇದುವರೆಗೆ ಟಿ20 ಪಂದ್ಯಗಳನ್ನು ಆಡದ ವಿರಾಟ್ ಕೊಹ್ಲಿ(virat kohli), ರೋಹಿತ್ ಶರ್ಮ(Rohit Sharma) ಮತ್ತು ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಕಳೆದ ವಾರ 17ನೇ ಸ್ಥಾನದಲ್ಲಿದ್ದ ಕೊಹ್ಲಿ 19ನೇ ಸ್ಥಾನಕ್ಕೆ ಇಳಿದಿದ್ದಾರೆ. 33ನೇ ಸ್ಥಾನದಲ್ಲಿದ್ದ ಕೆ.ಎಲ್ ರಾಹುಲ್ 35ಕ್ಕೆ ಜಾರಿದರೆ 34ನೇ ಸ್ಥಾನದಲ್ಲಿದ್ದ ರೋಹಿತ್ 39ಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ ICC Test Rankings: ಟೆಸ್ಟ್ ಶ್ರೇಯಾಂಕದಲ್ಲಿ ಉತ್ತಮ ಪಗ್ರತಿ ಸಾಧಿಸಿದ ಜೈಸ್ವಾಲ್,ರೋಹಿತ್
ತಿಲಕ್ ವರ್ಮಾ ಸ್ಥಾನ ಸ್ಥಿರ
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪದಾರ್ಪಣೆ ಮಾಡಿದ ತಿಲಕ್ ವರ್ಮ ಒಂದು ಅರ್ಧಶತಕ ಸೇರಿ ಉತ್ತಮ ರನ್ ಕಲೆಹಾಹಿದ ಪರಿಣಾಮ ಕಳೆದ ವಾರ ಬರೋಬ್ಬರಿ 21 ಸ್ಥಾನಗಳ ಪ್ರಗತಿ ಸಾಧಿಸಿ ಜೀವನ ಶ್ರೇಷ್ಠ 46ನೇ ಸ್ಥಾನ ಪಡೆದಿದ್ದರು. ಈ ಬಾರಿಯೂ ಅವರು ಇದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಅರ್ಶ್ದೀಪ್ ಸಿಂಗ್ಗೆ 17ನೇ ಸ್ಥಾನ
ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದುಕೊಳ್ಳಲು ಭಾರತೀಯ ಬೌಲರ್ಗಳು ವಿಫಲರಾಗಿದ್ದಾರೆ. ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರು 621 ಅಂಕದೊಂದಿಗೆ 17ನೇ ಸ್ಥಾನ ಪಡೆದಿದ್ದಾರೆ. ಇದುವೇ ಭಾರತೀಯ ಬೌಲರ್ ಒಬ್ಬನ ಉತ್ತಮ ಸಾಧನೆಯಾಗಿದೆ. ಅಫಘಾನಿಸ್ತಾನದ ಅನುಭವಿ ಸ್ಪಿನ್ನರ್ ರಶೀದ್ ಖಾನ್, ಆಸೀಸ್ ತಂಡದ ಜೋಶ್ ಹ್ಯಾಜಲ್ವುಡ್ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಮಂಗಳವಾರವಷ್ಟೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಮೂರನೇ ಸ್ಥಾನ ಪಡೆದಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ ಸದ್ಯ ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರು ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಬಾಂಗ್ಲಾದೇಶದ ಹಿರಿಯ ಸ್ಪಿನ್ನರ್ ಶಕೀಬ್ ಅಲ್-ಹಸನ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.