ತೈಪಿ (ತೈವಾನ್): ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ನೀರಜ್ ಚೋಪ್ರಾಗೆ ತೀವ್ರ ಪೈಪೋಟಿ ನೀಡಿ ಬೆಳ್ಳಿ ಪದಕ ಗೆದ್ದಿದ ಕರ್ನಾಟಕದ ಡಿ.ಪಿ. ಮನು(DP Manu) ಅವರು “ತೈವಾನ್ ಓಪನ್’ ಕೂಟದಲ್ಲಿ(Taiwan Athletics Open) ಚಿನ್ನದ ಪದಕ(DP Manu bags gold) ಜಯಿಸಿದ್ದಾರೆ. ಅಂತಿಮ ಎಸೆತದಲ್ಲಿ 81.58 ಮೀಟರ್‌ಗಳ ಗರಿಷ್ಠ ದೂರ ದಾಖಲಿಸಿ ಈ ಸಾಧನೆ ತೋರಿದರು. ಆರಂಭಿಕ ಎಸೆತವನ್ನು 78.32 ಮೀ ಎಸೆತದ ಮನು ದ್ವಿತೀಯ ಎಸೆತದಲ್ಲಿ 76.80 ಮೀ, 3ನೇ ಎಸೆತದಲ್ಲಿ 80.59 ಮೀ., 5ನೇ ಎಸೆತದಲ್ಲಿ 81.52 ಮೀ. ದೂರ ದಾಖಲಿಸಿದರು.
ಚಿನ್ನ ಗೆದ್ದರೂ ಕೂಡ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಒಲಿಂಪಿಕ್ಸ್ ಟಿಕೆಟ್ ಪಡೆಯಬೇಕಿದ್ದರೆ 85.50 ಮೀ. ದೂರ ಎಸೆಯಬೇಕು. ಮನದಂಡವನ್ನು ಇನ್ನೂ ಕೂಡ ದಾಟದ ಕಾರಣ ಮನುಗೆ ಇನ್ನೂ ಪ್ಯಾರಿಸ್ ಒಲಿಂಪಿಕ್ಸ್ ಬಾಗಿಲು ತೆರೆದಿಲ್ಲ. ನೀರಜ್ ಚೋಪ್ರಾ ಮತ್ತು ಕಿಶೋರ್ ಜೇನಾ ಮಾತ್ರ ಜಾವೆಲಿನ್ ವಿಭಾಗದಿಂದ ಒಲಿಂಪಿಕ್ಸ್ ಅರ್ಹತೆ ಪೆಡೆದಿದ್ದಾರೆ.
ನಿತ್ಯ ರಾಮರಾಜ್ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ 13.23 ಸೆಕೆಂಡ್‌ಗಳೊಂದಿಗೆ ಬೆಳ್ಳಿ ಗೆದ್ದರೆ, ಮಹಿಳಾ ಪೋಲ್ ವಾಲ್ಟ್ ರಾಷ್ಟ್ರೀಯ ದಾಖಲೆ ಹೊಂದಿರುವ ರೋಸಿ ಮೀನಾ ಪೌಲ್‌ರಾಜ್ (4.21 ಮೀ, 2022) 3.75 ಮೀಟರ್‌ಗಳೊಂದಿಗೆ ನಿರಾಶಾದಾಯಕ ಆರನೇ ಸ್ಥಾನ ಪಡೆದರು.
23 ವರ್ಷದ ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ತಂದೆ ಪ್ರಕಾಶ ಹಾಗೂ ತಾಯಿ ಸುಜಾತಾ. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇದೇ ವೇಳೆ ಮನು ಅವರು ಅಂತಾರಾಜ್ಯ, ಜೂನಿಯರ್ ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಆಳ್ವಾಸ್ ಕಾಲೇಜಿನಲ್ಲಿ ಅವರು ಪಡೆದ ತರಬೇತಿ, ನೀಡಿದ ಪ್ರದರ್ಶನವು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.
ಕಳೆದ ವರ್ಷ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮನು (84.14 ಮೀ.) 6ನೇ ಸ್ಥಾನ ಪಡೆದು ಭಾರೀ ಸಂಚಲನ ಮೂಡಿಸಿದ್ದರು. ಅಲ್ಲದೆ 2023ರಲ್ಲಿ ನಡೆದ ಏಶ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇಂದು ನಡೆದ ಫೆಡರೇಷನ್ ಕಪ್‌ನಲ್ಲಿ (82.06 ಮೀ) ಬೆಳ್ಳಿ ಗೆದ್ದಿದ್ದಾರೆ. ಮೂರನೇ ಸುತ್ತಿನ ವರೆಗೂ ಅಗ್ರಸ್ಥಾನ ಕಾಯ್ದುಕೊಂಡು ಅನುಭವಿ ನೀರಜ್ಗೆ ಒಂದು ಕ್ಷಣ ಬೆವರಿಳಿಸುವಂತೆ ಮಾಡಿದ್ದು ನಿಜಕ್ಕೂ ಸಣ್ಣ ಮಾತಲ್ಲ.
ಕಾಶಿನಾಥ ನಾಯ್ಕ್ ಗರಡಿಯಲ್ಲಿ ಬೆಳೆದ ಪ್ರತಿಭೆ
ಮನು ಅವರು ಕಾಶಿನಾಥ ನಾಯ್ಕ್ ಅವರ ಗರಡಿಯಲ್ಲಿ ಬೆಳೆದು ಬಂದ ಪ್ರತಿಭೆ. 2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್ ಅವರ ಪರಿಚಯವಾಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಮನು, 65 ಮೀಟರ್ ದೂರ ಭರ್ಜಿ ಎಸೆತದಿಂದ 80 ಮೀಟರ್ ದಾಟುವಂತಾದರು. ಇದೀಗ ವಿಶ್ವ ಚಾಂಪಿಯನ್ ನೀರಜ್ಗೆ ತೀವ್ರ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ನೀರಜ್ ಕೂಡ ಕಾಶಿನಾಥ ನಾಯ್ಕ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಪ್ರತಿಭೆಯಾಗಿದ್ದಾರೆ.