ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಬಾಬರ್ ಅಜಂ(Babar Azam) ಅವರ ವಿಚಾರದಲ್ಲಿ ಒಂದಲ್ಲ ಒಂದು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುತ್ತದೆ. ಇದೀಗ ಬಾಬರ್ ಅವರಿಗೆ ಮಾಜಿ ನಾಯಕ ಹಾಗೂ ಆಟಗಾರ ವಾಸಿಂ ಅಕ್ರಮ್(Wasim Akram) ಅವರು ನೀಡಿದ್ದ ಸಲಹೆಯೊಂದು ವೈರಲ್ ಆಗಿದೆ.
ಬಾಬರ್ ಅವರಿಗೆ ವಾಸಿಂ ಅಕ್ರಮ್ ಹಿಂದೊಮ್ಮೆ, ಆಟದ ಕಡೆಗಷ್ಟೇ ಕಮನ ಕೊಟ್ಟು, ಸಿಗುವ ಹಣ ತೆಗೆದುಕೊಂಡು ಮನೆಗೆ ಹೋಗುವುದಷ್ಟೇ ಉತ್ತಮ ಎಂಬುದಾಗಿ ಕಿವಿ ಮಾತು ಹೇಳಿದ್ದರಂತೆ. ಈ ವಿಚಾರವನ್ನು ಅಕ್ರಮ್ ಅವರೇ ಬಹಿರಂಗಪಡಿಸಿದ್ದಾರೆ. ಗೌತಮ್ ಗಂಭೀರ್ ಜತೆಗಿನ ಕ್ರೀಡಾ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿದ್ದಾರೆ.
“ಬಾಬರ್ ಅವರು ಉತ್ತಮ ಆಟಗಾರ. ಆತನಿಗೆ ನಾನು ಈ ಹಿಂದೆಯೇ ಹೇಳಿದ್ದೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಳ್ಳಬೇಡ ಎಂದು ಆದರೂ ಆತ ನನ್ನ ಮಾತು ಕೇಳಿಲ್ಲ. ಇದರಿಂದಾಗಿ ಆತ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡ” ಎಂದು ಅಕ್ರಮ್ ಹೇಳಿದರು.
ಬಾಬರ್ ಅವರು ವಿಶ್ವಕಪ್ ಸೋಲಿನ ಬಳಿಕ ಎಲ್ಲ ಮಾದರಿಯ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಒತ್ತಡದಿಂದ ಮುಕ್ತರಾಗಿರುವ ಅವರು ಮುಂದಿನ ದಿನಗಳಲ್ಲಿ ಮತ್ತೆ ತಮ್ಮ ಹಳೆಯ ಪ್ರಚಂಡ ಬ್ಯಾಟಿಂಗ್ ಫಾರ್ಮ್ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
29 ವರ್ಷದ ಬಾಬರ್ ಪಾಕ್ ಪರ 104 ಟಿ20 ಪಂದ್ಯಗಳನ್ನು ಆಡಿ 3485 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕ ಮತ್ತು 30 ಅರ್ಧಶತಕ ಒಳಗೊಂಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 117 ಪಂದ್ಯಗಳನ್ನು ಆಡಿ 19 ಶತಕ ಹಾಗೂ 32 ಅರ್ಧಶತಕದ ನೆರವಿನಿಂದ 5729 ರನ್ ಬಾರಿಸಿದ್ದಾರೆ.
ಗಂಭೀರ್ ಕೂಡ ಬಾಬರ್ ಅಜಂ ಉತ್ತಮ ಆಟಗಾರ ಎಂದು ಹೇಳಿದ್ದರು. ಅಲ್ಲದೆ ನಾಯಕತ್ವದಿಂದಲೇ ಅವರ ನೈಜ ಆಟಕ್ಕೆ ತೊಂದರೆಯಾಗಿದ್ದು ಎಂದು ಹೇಳಿದ್ದರು. ಮುಂದಿನ ಹತ್ತು ವರ್ಷಗಳ ಕಾಲ ಬಾಬರ್ ಶ್ರೇಷ್ಠ ಆಟದ ಜತೆಗೆ ಕ್ರಿಕೆಟ್ ಲೋಕವನ್ನು ಆಳಲಿದ್ದಾರೆ ಎಂದು ಗೌತಿ ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ Viral Video: ಅಫ್ರಿದಿ ಜತೆಗಿನ ಸಂಭ್ರಮಾಚರಣೆ ತಡೆದ ಬಾಬರ್ ಅಜಂ
ಬಾಬರ್ ಕಮ್ಬ್ಯಾಕ್ ಗ್ಯಾರಂಟಿ
ಬಾಬರ್ ಅಜಂ ಅವರು ನಾಯಕತ್ವ ವಹಿಸಿಕೊಳ್ಳುವ ಮುನ್ನ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದರು. ನಾಯಕತ್ವ ನೀಡಿದ ಬಳಿಕ ಅವರ ಮೇಲೆ ಹೆಚ್ಚಿನ ಒತ್ತಡವನ್ನು ಪಾಕ್ ಕ್ರಿಕೆಟ್ ಮಂಡಳಿ ಹಾಕಿದ ಪರಿಣಾಮ ಅವರಿಗೆ ಬ್ಯಾಟಿಂಗ್ ಕಡೆ ಗಮನ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ ಚಿಂತೆ ಮುಕ್ತರಾಗಿದ್ದಾರೆ. ಇನ್ನು ಅವರ ಅಸಲಿ ಆಟ ಪ್ರಾರಂಭವಾಗುತ್ತದೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಅವರ ಹೆಸರೇ ರಾರಾಜಿಸಲಿದೆ ಎಂದು ಗಂಭೀರ್ ಹೇಳಿದ್ದರು. ಸ್ಪೋರ್ಟ್ಸ್‌ಕೀಡಾ ಶೋನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಮ್ ಅಕ್ರಮ್ ಜತೆ ಮಾತನಾಡುವ ವೇಳೆ ಗಂಭೀರ್ ಈ ವಿಚಾರವನ್ನು ಹೇಳಿದ್ದರು.