Site icon Vistara News

Tamim Iqbal: ಕಣ್ಣೀರು ಸುರಿಸುತ್ತಲೇ ಕ್ರಿಕೆಟ್​ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್

tamim iqbal retired today

ಚಿತ್ತಗಾಂಗ್​: ಬಾಂಗ್ಲಾದೇಶದ ಏಕದಿನ ಕ್ರಿಕೆಟ್​ ತಂಡದ ನಾಯಕ ತಮೀಮ್ ಇಕ್ಬಾಲ್(Tamim Iqbal) ಅವರು ದಿಢೀರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.(tamim iqbal retired) ಏಕದಿನ ವಿಶ್ವ ಕಪ್​ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೆ ಅವರ ಈ ನೀವೃತ್ತಿ ನಿರ್ಧಾರ ಬಾಂಗ್ಲಾ ತಂಡಕ್ಕೆ ಆಘಾತ ತಂದಿದೆ. ಗುರುವಾರ ಮಾಧ್ಯಮದ ಮುಂದೆ ಕಣ್ಣೀರಿಡುತ್ತಲೇ ತಕ್ಷಣಕ್ಕೆ ಜಾರಿಗೆ ಬರುವಂತೆ ವಿದಾಯ ಘೋಷಿಸುವ ಮೂಲಕ ತಮ್ಮ 16 ವರ್ಷಗಳ ಕ್ರಿಕೆಟ್​ ಬಾಳ್ವೆಗೆ ತೆರೆ ಎಳೆದರು.

ಅಫಘಾನಿಸ್ತಾನ ವಿರುದ್ಧ ಬುಧವಾರ ಆರಂಭಗೊಂಡ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಡಕ್​ವರ್ತ್​ ನಿಯಮದ ಅನ್ವಯ 17 ರನ್​ಗಳಿಂದ ಸೋಲು ಕಂಡಿತ್ತು. ಇದಾದ ಮರು ದಿನವೇ ತಮೀಮ್ ಇಕ್ಬಾಲ್ ಎಲ್ಲ ಮಾದರಿಕೆ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ.

“ಅಫಘಾನಿಸ್ತಾನ ವಿರುದ್ಧದ ಪಂದ್ಯವೇ ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ನಾನು ತಕ್ಷಣಕ್ಕೆ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಇದು ಹಠಾತ್ ನಿರ್ಧಾರವಲ್ಲ. ಈ ಬಗ್ಗೆ ಯೋಚಿಸಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ನನ್ನ ಕುಟುಂಬದೊಂದಿಗೆ ಮಾತನಾಡಿದ್ದೇನೆ. ಕ್ರಿಕೆಟ್‌ ನಿಂದ ನಿವೃತ್ತಿಯಾದ ನಂತರ, ನಾನು ನನ್ನ ಪ್ರೀತಿಪಾತ್ರರ ಜತೆ ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಭವಿಷ್ಯದಲ್ಲಿ ಇದನ್ನು ಹೆಚ್ಚು ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ತಮೀಮ್ ಗದ್ಗದಿತರಾದರು.

ಇದನ್ನೂ ಓದಿ BAN vs AFG: ಅಫಘಾನಿಸ್ತಾನ ವಿರುದ್ಧ ಟೆಸ್ಟ್​ ಗೆದ್ದು ಐತಿಹಾಸಿಕ ದಾಖಲೆ ಬರೆದ ಬಾಂಗ್ಲಾದೇಶ

ಸಹ ಆಟಗಾರರಿಗೆ ಧನ್ಯವಾದ ತಿಳಿಸಿದ ಇಕ್ಬಾಲ್

16 ವರ್ಷಗಳ ಸುದೀರ್ಘ ಕಾಲದಲ್ಲಿ ನನ್ನ ಮೇಲೆ ಭರವಸೆಯಿಟ್ಟ ನನ್ನ ಸಹ ಆಟಗಾರರು, ಕೋಚ್ ಗಳು, ಕ್ರಿಕೆಟ್ ಮಂಡಳಿ ಸದಸ್ಯರು ಹಾಗೂ ಕಷ್ಟದ ಸಂದರ್ಭದಲ್ಲಿಯೂ ಜತೆಯಾಗಿ ನಿಂತ ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಅವರ ಪ್ರೀತಿ ಮತ್ತು ನಂಬಿಕೆಗೆ ಎಂದಿಗೂ ನಾನು ಚಿರಋಣಿ ಎಂದು ಹೇಳಿ ಕಣ್ಣೀರಿಟ್ಟರು. ಇದೀಗ ತಮೀಮ್ ಇಕ್ಬಾಲ್ ಅವರು ನಿವೃತ್ತಿ ನೀಡಿದ ಕಾರಣ ಅಫಘಾನಿಸ್ತಾನ ವಿರುದ್ಧ ಉಳಿದಿರುವ 2 ಏಕದಿನ ಪಂದ್ಯಕ್ಕೆ ನೂತನ ನಾಯಕನ ಆಯ್ಕೆ ಮಾಡಬೇಕಿದೆ. ಜತೆಗೆ ಏಕದಿನ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಬಲ್ಲ ಸೂಕ್ತ ನಾಯಕ ಆಯ್ಕೆಯೂ ಬಾಂಗ್ಲಾ ಕ್ರಿಕೆಟ್​ ಮಂಡಳಿಗೆ ಸವಾಲಾಗಿದೆ.

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಇಕ್ಬಾಲ್​ 2007ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅರ್ಧಶತಕ ಸಿಡಿಸಿ ತಂಡದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದರು. ಬಾಂಗ್ಲಾ ವಿರುದ್ಧ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು. ಒಟ್ಟಾರೆ ಅವರು ಬಾಂಗ್ಲಾ ಪರ 69 ಟೆಸ್ಟ್ ಪಂದ್ಯಗಳಲ್ಲಿ 5082 ರನ್, 238 ಏಕದಿನ ಪಂದ್ಯಗಳಲ್ಲಿ 8224 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1758 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಒಟ್ಟು 25 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 10, ಏಕದಿನದಲ್ಲಿ 14, ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ.

Exit mobile version