ಢಾಕಾ: ಪ್ರವಾಸಿ ಭಾರತ ವಿರುದ್ಧದ ಸರಣಿಗೂ ಮುನ್ನ ಬಾಂಗ್ಲಾದೇಶ(IND VS BANGLA) ತಂಡದ ನಾಯಕ ತಮೀಮ್ ಇಕ್ಬಾಲ್ ತೊಡೆಸಂದು ಗಾಯಕ್ಕೆ ತುತ್ತಾಗಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಈ ಮೂಲಕ ಸರಣಿ ಆರಂಭಕ್ಕೂ ಮೊದಲೇ ಬಾಂಗ್ಲಾದೇಶ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
ಬುಧವಾರ ಅಭ್ಯಾಸ ಪಂದ್ಯದ ವೇಳೆ ತಮೀಮ್ ಇಕ್ಬಾಲ್ ಅವರು ತೊಡೆಸಂದು ಗಾಯಕ್ಕೆ ತುತ್ತಾಗಿರುವುದು ಎಂಆರ್‌ಐ ಸ್ಕ್ಯಾನ್ ಮೂಲಕ ಬಹಿರಂಗವಾಗಿದೆ ಎಂದು ಬಾಂಗ್ಲಾದೇಶ ತಂಡದ ಫಿಸಿಯೋ ಇಸ್ಲಾಂ ಖಾನ್ ಹೇಳಿದ್ದಾರೆ. ಇದೀಗ ಇವರ ಸ್ಥಾನಕ್ಕೆ ‘ಎ’ ತಂಡದ ಶೋರಿಫುಲ್ ಇಸ್ಲಾಮ್‌ಗೆ ಒಡಿಐ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
“ತಮೀಮ್ ಇಕ್ಬಾಲ್‌ಗೆ ಎರಡು ವಾರಗಳ ಕಾಲ ಗಾಯಕ್ಕೆ ಚಿಕಿತ್ಸೆ ನೀಡಲಿದ್ದೇವೆ. ಬಳಿಕ ಅವರು ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಆದ್ದರಿಂದ ಮೂರು ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗುತ್ತಿದ್ದಾರೆ ಹಾಗೂ ಟೆಸ್ಟ್ ಸರಣಿಗೂ ಕೂಡ ಅವರು ಲಭ್ಯರಾಗುವುದು ಅನುಮಾನ” ಎಂದು ಫಿಸಿಯೋ ಇಸ್ಲಾಂ ಖಾನ್ ಹೇಳಿದ್ದಾರೆ.
ಮತ್ತೊಂದೆಡೆ ಪ್ರಮುಖ ವೇಗಿ ಟಾಸ್ಕಿನ್ ಅಹ್ಮದ್ ಕೂಡ ಬೆನ್ನು ನೋವಿನ ಸಮಸ್ಯೆಯಿಂದ ಸಂಪೂರ್ಣ ಫಿಟ್ ಇಲ್ಲದ ಕಾರಣ ಮೊದಲನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದೀಗ ತಮೀಮ್ ಇಕ್ಬಾಲ್ ಅವರು ಗಾಯಕ್ಕೀಡಾಗಿರುವುದು ಬಾಂಗ್ಲಾಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿ ಡಿಸೆಂಬರ್ 4 ರಿಂದ ಆರಂಭವಾಗಲಿದೆ. ಢಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲನೇ ಏಕದಿನ ಪಂದ್ಯದ ಮೂಲಕ ಈ ಸರಣಿಗೆ ಚಾಲನೆ ಸಿಗಲಿದೆ. ಆದರೆ ತಂಡದ ನಾಯಕನ್ನನ್ನೇ ಕಳೆದುಕೊಂಡಿರುವ ಬಾಂಗ್ಲಾ ಭಾರತದ ಸವಾಲನ್ನು ಮೆಟ್ಟಿನಿಂತೀತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | IND VS BANGLA | ಢಾಕಾ ತಲುಪಿದ ಟೀಮ್ ಇಂಡಿಯಾ; ಭಾನುವಾರ ಮೊದಲ ಏಕದಿನ ಕದನ