Site icon Vistara News

BCCI Review Meeting | ಏಕ ದಿನ ವಿಶ್ವ ಕಪ್​ಗೆ ತಂಡದ ರಚನೆ, ಒತ್ತಡದ ನಿರ್ವಹಣೆಗೆ ಆದ್ಯತೆ

ಮುಂಬಯಿ : ನೂತನ ಅಧ್ಯಕ್ಷ ರೋಜರ್​ ಬಿನ್ನಿ ನೇತೃತ್ವದಲ್ಲಿ ಭಾನುವಾರ ಬಿಸಿಸಿಐ ಭಾರತ ಕ್ರಿಕೆಟ್​ ತಂಡದ ಪ್ರದರ್ಶನ ಪರಾಮರ್ಶೆ ಸಭೆಯನ್ನು (BCCI Review Meeting) ನಡೆಸಿತು. ಟೀಮ್​ ಇಂಡಿಯಾ ಕೋಚ್​ ವಿವಿಎಸ್​ ಲಕ್ಷ್ಮಣ್​, ಎನ್​ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್​ ಹಾಗೂ ಬಿಸಿಸಿಐ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ಏಕ ದಿನ ವಿಶ್ವ ಕಪ್​ ಗೆಲ್ಲುವ ಗುರಿಯೊಂದಿಗೆ ಆಟಗಾರರ ಆಯ್ಕೆ ಮತ್ತು ಒತ್ತಡ ನಿರ್ವಹಣೆಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಯಿತು.

ಐಪಿಎಲ್​ ಆಧಾರದಲ್ಲಿ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡುವುದಕ್ಕಿಂತ ಬದಲಾಗಿ, ದೇಶೀಯ ಕ್ರಿಕೆಟ್ ಟೂರ್ನಿಗಳ ಪ್ರದರ್ಶನವನ್ನೇ ಮಾನದಂಡವಾಗಿಸಲು ಇದೇ ವೇಳೆ ತೀರ್ಮಾನಿಸಲಾಯಿತು. ಐಪಿಎಲ್ ಸೇರಿದಂತೆ ಯಾವುದೇ ತಂಡಕ್ಕೆ ಆಯ್ಕೆ ಬಯಸಲು ಯುವ ಆಟಗಾರರು ದೇಶಿಯ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸುವ ಸಲಹೆ ಸಭೆಯಲ್ಲಿ ವ್ಯಕ್ತಗೊಂಡಿತು.

ಯುವ ಆಟಗಾರರು ಹಂತಹಂತವಾಗಿ ಮೇಲಕ್ಕೇರುವ ಮೂಲಕ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಯಿತು. ಇದರಿಂದ ಆಟಗಾರನೊಬ್ಬ ಪೂರ್ಣ ಪ್ರಮಾಣದಲ್ಲಿ ಪ್ರದರ್ಶನದ ಕಡೆಗೆ ಒತ್ತು ನೀಡುವುದಕ್ಕೆ ಸಾಧ್ಯ ಎಂಬುದಾಗಿ ಹೇಳಲಾಯಿತು.

ಗಾಯದ ಸಮಸ್ಯೆ ನಿವಾರಣೆಗೆ ತಂತ್ರ

ಟೀಮ್ ಇಂಡಿಯಾದ ಆಟಗಾರರು ಪ್ರಮುಖ ಸರಣಿಗಳಲ್ಲಿ ಗಾಯಗೊಳ್ಳುತ್ತಿರುವ ಬಗ್ಗೆ ನೂತನ ಅಧ್ಯಕ್ಷ ರೋಜರ್​ ಬಿನ್ನಿ ಅವರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಇನ್ನು ಮುಂದೆ ತಂಡಕ್ಕೆ ಆಯ್ಕೆಯಾಗುವ ಪ್ರತಿಯೊಬ್ಬ ಆಟಗಾರನೂ ಯೋಯೋ ಟೆಸ್ಟ್​ ಮತ್ತು ನಿಗದಿತ ಮಾನದಂಡಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಬಿಸಿಸಿಐ ಗುತ್ತಿಗೆಯನ್ನು ಪಡೆದುಕೊಂಡಿರುವ ಆಟಗಾರರು ಯೋಯೋ ಹಾಗೂ ಡೆಕ್ಸಾ ಪರೀಕ್ಷೆಯನ್ನು ಪಾಸ್​ ಮಾಡಬೇಕು ಎಂಬ ರೋಜರ್ ಬಿನ್ನಿ ಅವರ ಮಾತನ್ನು ಸಭೆಯಲ್ಲಿದ್ದ ಎಲ್ಲರೂ ಒಪ್ಪಿಕೊಂಡರು ಎಂದು ಹೇಳಲಾಗಿದೆ.

ವಿಶ್ವ ಕಪ್​ಗೆ 20 ಆಟಗಾರರ ಆಯ್ಕೆ

ಭಾರತದ ಆತಿಥ್ಯದಲ್ಲಿ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್​ನಲ್ಲಿ ನಡೆಯಲಿರುವ ಏಕ ದಿನ ಕ್ರಿಕೆಟ್​ ವಿಶ್ವ ಕಪ್​ಗೆ 20 ಯುವ ಆಟಗಾರರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಇದೇ ವೇಳೆ ಕೈಗೊಳ್ಳಲಾಯಿತು. ಈ ಪಟ್ಟಿಯಲ್ಲಿರುವ ಆಟಗಾರರಿಗೆ ಮುಂದಿನ ಐಪಿಎಲ್​ನಲ್ಲಿ ಒತ್ತಡ ನಿರ್ವಹಣೆಯ ಉದ್ದೇಶದಿಂದ ವಿಶ್ರಾಂತಿ ನೀಡುವ ಅಥವಾ ಹೆಚ್ಚು ಪಂದ್ಯಗಳನ್ನು ಆಡಿಸದಿರುವ ನಿರ್ಧಾರ ಕೈಗೊಳ್ಳಲಾಯಿತು.

ಆಯ್ಕೆಯಾಗುವ 20 ಆಟಗಾರರಿಗೆ ನಾನಾ ಸರಣಿಗೆ ಪೂರಕವಾಗಿ ಬದಲಾಯಿಸುವ ಯೋಜನೆಯನ್ನೂ ಇದೇ ವೇಳೆ ಪ್ರಕಟಿಸಲಾಯಿತು. ಆದರೆ, ಸಹಾಯಕ ಸಿಬ್ಬಂದಿಯನ್ನು ಬದಲಾಯಿಸುವ ಯಾವುದೇ ತೀರ್ಮಾನವನ್ನು ಈ ವೇಳೆ ಪ್ರಕಟಿಸಲಿಲ್ಲ. ಇದರ ಜತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರುವ ಗುರಿಯನ್ನೂ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ | BCCI Meeting | ಹೊಸ ವರ್ಷಕ್ಕೆ ಸಭೆ ಕರೆದ ಬಿಸಿಸಿಐ; ಕೋಚ್ ದ್ರಾವಿಡ್​, ನಾಯಕ ರೋಹಿತ್​ಗೆ ನಡುಕ!

Exit mobile version