Site icon Vistara News

Team India | ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಗೆಲುವಿನ ಸಂಭ್ರಮಕ್ಕೆ ಅಭಿಮಾನಿಗಳ ಮೆಚ್ಚುಗೆ

team india

ಹೈದರಾಬಾದ್‌ : ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಭಾರತ ತಂಡ ೨-೧ ಅಂತರದಿಂದ ಜಯಿಸಿದಾಗ ಕ್ರಿಕೆಟ್‌ ಅಭಿಮಾನಿಗಳಿಗೆ ಸಹಜವಾಗಿ ಖುಷಿಯಾಗಿದೆ. ಆದರೆ, ಹೈದರಾಬಾದ್‌ನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಭಾರತ ತಂಡ ಗೆದ್ದಾಗ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್‌ ಶರ್ಮ ಸಂಭ್ರಮಿಸಿದ ರೀತಿ ಕ್ರಿಕೆಟ್‌ ಪ್ರೇಮಿಗಳಿಗೆ ಇನ್ನೂ ಹೆಚ್ಚು ಖುಷಿ ತಂದಿದೆ.

ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ೬೩ ರನ್‌ ಬಾರಿಸಿ ಕೊನೇ ಓವರ್‌ನಲ್ಲಿ ಔಟಾಗಿದ್ದರು. ಈ ವೇಳೆ ಭಾರತ ತಂಡದ ಗೆಲುವಿಗೆ ೪ ಎಸೆತಗಳಲ್ಲಿ ಐದು ರನ್‌ ಬೇಕಾಗಿತ್ತು. ಬ್ಯಾಟ್‌ ಮಾಡಲು ಹೋದ ದಿನೇಶ್‌ ಕಾರ್ತಿಕ್ ಒಂದು ರನ್‌ ಬಾರಿಸಿದರು. ಹೀಗಾಗಿ ಟೀಮ್ ಇಂಡಿಯಾಗೆ ಮೂರು ಎಸೆತಗಳಲ್ಲಿ ನಾಲ್ಕು ರನ್‌ ಬೇಕಾಯಿತು. ಬಳಿಕ ಹಾರ್ದಿಕ್ ಪಾಂಡ್ಯ ಒಂದು ಎಸೆತವನ್ನು ವ್ಯರ್ಥ ಮಾಡಿದರು. ಹೀಗಾಗಿ ಪಂದ್ಯ ರೋಚಕ ಹಂತಕ್ಕೆ ತಿರುಗಿತು. ಕೊನೇ ಎರಡು ಎಸೆತಗಳಿಗೆ ನಾಲ್ಕು ರನ್‌ ಬೇಕಾಯಿತು. ನಂತರದ ವೈಡ್‌ ಯಾರ್ಕರ್‌ ಎಸೆತದಲ್ಲಿ ಪಾಂಡ್ಯ ಫೊರ್‌ ಬಾರಿಸಿ ಗೆಲುವು ತಂದುಕೊಟ್ಟರು.

ಅದಕ್ಕಿಂತ ಮೊದಲು ಔಟಾದ ವಿರಾಟ್‌ ಹಾಗೂ ನಾಯಕ ರೋಹಿತ್‌ ಶರ್ಮ ಪೆವಿಲಿಯನ್‌ಗೆ ಹೋಗುವ ಮೆಟ್ಟಿಲ ಮೇಲೆ ಕುಳಿತು ಪಂದ್ಯದ ಕೊನೇ ಹಂತವನ್ನು ವೀಕ್ಷಿಸುತ್ತಿದ್ದರು. ಇನ್ನೇನು ಗೆಲುವು ಸಾಧಿಸುತ್ತಿದ್ದಂತೆ ಅವರಿಬ್ಬರೂ ಕುಣಿದಾಡಿ ಸಂಭ್ರಮಿಸಿದರು. ಈ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ.

ಇದನ್ನೂ ಓದಿ | Virat Kohli | ಆರ್‌ಸಿಬಿ ಅಲ್ರೊ, ಟೀಮ್‌ ಇಂಡಿಯಾ ಎಂದು ಪ್ರೇಕ್ಷಕರಿಗೆ ಸನ್ನೆ ಮಾಡಿದ ವಿರಾಟ್‌ ಕೊಹ್ಲಿ

Exit mobile version