Site icon Vistara News

Team India ಪ್ರಕಟ: ಇಂಗ್ಲೆಂಡ್‌ ಟೆಸ್ಟ್‌ಗಿಲ್ಲ ರೋಹಿತ್‌

Team India

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ ಶುಕ್ರವಾರದಿಂದ ನಡೆಯಲಿರುವ ಟೆಸ್ಟ್‌ ಪಂದ್ಯಕ್ಕೆ Team India ಪ್ರಕಟವಾಗಿದ್ದು, ಕಾಯಂ ನಾಯಕ ರೋಹಿತ್ ಶರ್ಮ ಅಲಭ್ಯತೆ ಖಾತರಿಯಾಗಿದೆ. ಹೀಗಾಗಿ ವೇಗದ ಬೌಲರ್‌ ಜಸ್‌ಪ್ರಿತ್‌ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

ಬುಧವಾರ ಸಂಜೆಯ ವೇಳೆ ಬಿಸಿಸಿಐ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತಿ ಪಡೆಯದ ರೋಹಿತ್‌ ಶರ್ಮ ಆಡುವ ಬಳಗದಲ್ಲಿ ಇರುವುದಿಲ್ಲ ಎಂದು ಹೇಳಿದೆ. ಅದೇ ರೀತಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಉಪನಾಯಕನ ಹೊಣೆಗಾರಿಕೆ ವಹಿಸಲಾಗಿದೆ.

ರೋಹಿತ್‌ ಆಡದಿರುವ ಕಾರಣ ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ದೊರೆಯಲಿದೆ. ವಿದೇಶಿ ಪಿಚ್‌ಗಳಲ್ಲಿ ಅಡಿ ಅನುಭವ ಹೊಂದಿರುವ ಅವರು ಶುಬ್ಮನ್‌ ಗಿಲ್‌ ಜತೆ ಆರಂಭಿಕರಾಗಿ ಬ್ಯಾಟ್‌ ಮಾಡುವ ಸಾಧ್ಯತೆಗಳಿವೆ. ಕಳೆದ ವರ್ಷ ಭಾರತ ತಂಡ ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದ ವೇಳೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದರು. ಇದೀಗ ಅವರು ನಾಯಕತ್ವಕ್ಕೆ ವಿದಾಯ ಹೇಳಿದ್ದು, ಹೊಸ ನಾಯಕನಡಿಯಲ್ಲಿ ಹಳೆ ಸರಣಿ ಮುಂದುವರಿಯಲಿದೆ.

ಸರಣಿ ಗೆಲ್ಲುವ ತವಕ

ಕಳೆದ ವರ್ಷ ಆರಂಭಗೊಂಡಿದ್ದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ನಾಲ್ಕು ಹಣಾಹಣಿಗಳು ಮುಗಿದ ತಕ್ಷಣ ಭಾರತ ತಂಡದ ಹಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆ ಅವಧಿಯಲ್ಲಿ ಕೋವಿಡ್‌-೧೯ ರೂಲ್ಸ್‌ ಹೆಚ್ಚು ಕಠಿಣವಾಗಿದ್ದ ಕಾರಣ ಒಬ್ಬರು ಸೋಂಕಿಗೆ ಒಳಗಾದರೂ ಇತರರೆಲ್ಲರೂ ಐಸೋಲೇಷನ್‌ಗೆ ಒಳಗಾಗುವ ಅನಿವಾರ್ಯತೆ ಇತ್ತು. ಹೀಗಾಗಿ ಆಟಗಾರರು ಇಂಗ್ಲೆಂಡ್‌ನಿಂದ ಗಂಟುಮೂಟೆ ಕಟ್ಟಿದ್ದರು. ಅದರಲ್ಲಿ ಉಳಿದಿರುವ ಒಂದು ಪಂದ್ಯವನ್ನು ಈಗ ಆಯೋಜಿಸಲಾಗುತ್ತಿದೆ. ೪ರಲ್ಲಿ ಎರಡು ಪಂದ್ಯ ಗೆದ್ದು ಒಂದು ಡ್ರಾ ಹಾಗೂ ಒಂದು ಸೋಲಿಗೆ ಒಳಗಾಗಿರುವ ಭಾರತ, ಸದ್ಯ ಸರಣಿಯಲ್ಲಿ ೨-೧ ಅಂತರದ ಮುನ್ನಡೆ ಪಡೆದುಕೊಂಡಿದೆ. ಇದೇ ವೇಳೆ ಇತ್ತೀಚೆಗೆ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ೩ ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡಿರುವ ಇಂಗ್ಲೆಂಡ್‌ ತಂಡ ಭಾರತಕ್ಕಿಂತ ಹೆಚ್ಚು ವಿಶ್ವಾಸದಲ್ಲಿದೆ. ಜತೆಗೆ ಗಾಯ ಹಾಗೂ ಕೊರೊನಾ ಕಾರಣಕ್ಕೆ ಟೀಮ್‌ ಇಂಡಿಯಾ, ಹಿರಿಯ ಆಟಗಾರರ ಸೇವೆಯನ್ನೂ ಕಳೆದುಕೊಂಡಿದೆ.

೧೫ ವರ್ಷಗಳ ಬಳಿಕ ಸರಣಿ?

ಎಜ್‌ಬಾಸ್ಟನ್‌ ಪಂದ್ಯವನ್ನು ಭಾರತ ಗೆದ್ದರೆ ೧೫ ವರ್ಷದ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ಸೃಷ್ಟಿಸಿಕೊಳ್ಳಲಿದೆ. ೨೦೦೭ರಲ್ಲಿ ರಾಹುಲ್‌ ದ್ರಾವಿಡ್‌ ನೇತೃತ್ವದಲ್ಲಿ ಆಂಗ್ಲರ ನಾಡಿಗೆ ತೆರಳಿದ್ದ ಭಾರತ ೧-೦ ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ೨೦೧೧, ೨೦೧೪, ೨೦೧೮ರಲ್ಲಿ ಭಾರತ ಹಿನ್ನಡೆ ಅನುಭವಿಸಿತ್ತು. ಇದೀಗ ದ್ರಾವಿಡ್ ಅವರು ಟೀಮ್‌ ಇಂಡಿಯಾದ ಕೋಚ್‌ ಆಗಿದ್ದಾರೆ.

ತಂಡಗಳು:

ಭಾರತ: ಜಸ್‌ಪ್ರಿತ್‌ ಬುಮ್ರಾ (ನಾಯಕ), ಮಯಾಂಕ್‌ ಅಗರ್ವಾಲ್‌, ಶುಬ್ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ಚೇತೇಶ್ವರ್‌ ಪೂಜಾರ, ರಿಷಭ್‌ ಪಂತ್‌, ಕೆ. ಎಸ್. ಭರತ್‌, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಶಾರ್ದುಲ್‌ ಠಾಕೂರ್‌, ಮೊಹಮ್ಮದ್ ಶಮಿ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್‌, ಪ್ರಸಿದ್ಧ್‌ ಕೃಷ್ಣ.

ಇಂಗ್ಲೆಂಡ್‌: ಬೆನ್‌ ಸ್ಟೋಕ್ಸ್‌ (ನಾಯಕ), ಜೋ ರೂಟ್‌, ಜೇಮ್ಸ್‌ ಆಂಡರ್ಸನ್‌, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್‌, ಸ್ಟುವರ್ಟ್‌ ಬ್ರಾಡ್‌, ಹ್ಯಾರಿ ಬ್ರೂಕ್ಸ್‌, ಜಾಕ್ ಕ್ರಾವ್ಲಿ, ಬೆನ್‌ ಫೋಕ್ಸ್‌, ಜಾಕ್‌ ಲೀಚ್‌, ಕ್ರೆಗ್‌ ಓವರ್ಟನ್‌, ಜೇಮಿ ಓವರ್ಟನ್‌, ಮ್ಯಾಥ್ಯೂ ಪಾಟ್ಸ್‌, ಓಲಿ ಪೋಪ್‌.

ಪಂದ್ಯದ ತಾಣ: ಎಜ್‌ಬಾಸ್ಟನ್‌ ಬರ್ಮಿಂಗ್‌ಹ್ಯಾಮ್‌

ಆರಂಭ ಸಮಯ: ಮಧ್ಯಾಹ್ನ ೩ ಗಂಟೆಗೆ

ನೇರ ಪ್ರಸಾರ: ಸೋನಿ ನೆಟ್ವರ್ಕ್‌ (ಸೋನಿ ೬ ಹಾಗೂ ಸೋನಿ ೧೦ ಚಾನೆಲ್‌ಗಳಲ್ಲಿ ಪ್ರಸಾರ. ಸೋನಿ ಲೈವ್‌ನಲ್ಲಿ ಸ್ಟ್ರೀಮಿಂಗ್‌)

ಇದನ್ನೂ ಓದಿ: Team India ವಿರುದ್ಧದ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ: ಯಾರೆಲ್ಲ ಇದ್ದಾರೆ ತಂಡದಲ್ಲಿ

Exit mobile version