ಮುಂಬಯಿ: ಟೀಮ್ ಇಂಡಿಯಾದ(Team India) ನೂತನ ಬೌಲಿಂಗ್ ಕೋಚ್(Team India Bowling Coach) ಆಗಿ ಜಹೀರ್ ಖಾನ್(Zaheer Khan) ಅಥವಾ ಲಕ್ಷ್ಮೀಪತಿ ಬಾಲಾಜಿ(Lakshmipathy Balaji) ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್(Morne Morkel) ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮಾರ್ಕೆಲ್ ಅವರು ಪಾಕಿಸ್ತಾನದ ಬೌಲಿಂಗ್ ಕೋಚ್ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಸದ್ಯ ಅವರು ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಕೆಲ್, ಗಂಭೀರ್ ಜತೆ ಐಪಿಎಲ್ನಲ್ಲಿ ಹಲವು ವರ್ಷ ಜತೆಯಾಗಿ ಆಡಿದ ಮತ್ತು ಕೋಚಿಂಗ್ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಹಾಯಕ ಕೋಚ್ ಆಗಿ ನೆದರ್ಲೆಂಡ್‌ನ ಮಾಜಿ ಕ್ರಿಕೆಟಿಗ ಡ್ಯಾನ್ ಟೆನ್ ಡೊಶ್ಚಾಟೆ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ.
ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ. ಜುಲೈ 26, 27 ಹಾಗೂ 29 ರಂದು ಟಿ20 ಪಂದ್ಯಗಳು ನಡೆಯಲಿದೆ. ಟಿ20 ಪಂದ್ಯಗಳಿಗೆ ಪಲ್ಲೆಕೆಲ್ಲೆ ಆತಿಥ್ಯ ವಹಿಸಲಿದೆ. ಏಕದಿನ ಸರಣಿ ಆಗಸ್ಟ್ 1, 4 ಹಾಗೂ 7 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.
ಇದನ್ನೂ ಓದಿ Shahid Afridi: ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡವನ್ನು ಪಾಕ್ಗೆ ಕರೆತರುವ ಉಪಾಯ ಮಾಡಿದ ಮಾಜಿ ನಾಯಕ
ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿ ಕೆಲ ಆಟಗಾರರಿಗೆ ವಿಶ್ರಾಂತಿ ಸಿಗಲಿದೆ ಎಂದು ತಿಳಿದುಬಂದಿದೆ. ಏಕದಿನ ಸರಣಿಯಲ್ಲಿ ಕೆ.ಎಲ್ ರಾಹುಲ್, ಟಿ20 ಸರಣಿಯಲ್ಲಿ ಹಾರ್ದಿಕ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಕೋಚ್ ಹುದ್ದೆಗೆ ಗಂಭೀರ್ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಹೌದು ವಿರಾಟ್ ಕೊಹ್ಲಿ ಮತ್ತು ಗಂಭೀರ್ ಐಪಿಎಲ್ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.