ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಯ ಕೊನೇ ಪಂದ್ಯಮಳೆಯ ಕಾರಣಕ್ಕೆ ರದ್ದಾಗಿರುವುದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಬೇಸರದ ವಿಷಯ. ರಿಷಭ್ ಪಂತ್ ನೇತೃತ್ವದ ಟೀಮ್ ಇಂಡಿಯಾ ಬೆಂಗಳೂರಿನ ಬ್ಯಾಟಿಂಗ್ ಪಿಚ್‌ನ ಅನುಕೂಲಗಳನ್ನು ಬಳಸಿಕೊಂಡು ಪಂದ್ಯ ಗೆದ್ದೇ ಗೆಲ್ಲುತ್ತದೆ ಹಾಗೂ ಸರಣಿ 3-2 ಅಂತರದಲ್ಲಿ ಭಾರತದ ಪಾಲಾಗುತ್ತದೆ ಎಂದು ಅವರೆಲ್ಲರೂ ನಂಬಿದ್ದರು. ಆದರೆ, ಅಭಿಮಾನಿಗಳ ಆಸೆ ಈಡೇರಲು ಮಳೆರಾಯ ಅವಕಾಶ ಕೊಡಲಿಲ್ಲ.
ಹಾಗೆಂದು ಟೀಮ್ ಇಂಡಿಯಾದ ಅಪ್ಪಟ ಅಭಿಮಾನಿಗಳು ಬೇಸರ ಪಟ್ಟುಕೊಳ್ಳಬೇಕಾಗಿಲ್ಲ. ಈ ಸರಣಿ ಡ್ರಾ ಆಗುವುದರೊಂದಿಗೆ ಭಾರತ ಟಿ20 ಮಾದರಿಯಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ತವರಿನ ನೆಲದಲ್ಲಿ ಸೋಲು ರಹಿತ 9 ಟಿ೨೦ ಸರಣಿಯಲ್ಲಿ (ಗೆಲುವು ಮತ್ತು ಡ್ರಾ ಸೇರಿಕೊಂಡು) ಪಾಲ್ಗೊಂಡ ಶ್ರೇಯಸ್ಸಿಗೆ ಪಾತ್ರವಾಗಿದೆ. ಈ ಮೂಲಕ 12 ವರ್ಷಗಳ ಹಿಂದೆ ಆಸ್ಟ್ರೇಲಿಯಾ ತಂಡ 8 ಸರಣಿಯಲ್ಲಿ ಸೋಲು ಕಾಣದೇ ನಿರ್ಮಿಸಿದ್ದ ದಾಖಲೆ ಮುರಿದಿದೆ.
ಭಾರತ ತಂಡದ ಈ ದಾಖಲೆಯ ಅಭಿಯಾನ ಆರಂಭಗೊಂಡಿರುವುದು 2019ರಲ್ಲಿ. ಅದು ಕೂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧವೇ ಎಂಬುದು ಕಾಕತಾಳಿಯ. 3 ಪಂದ್ಯಗಳ ಆ ಸರಣಿಯ ಕೊನೇ ಪಂದ್ಯವೂ ಒಂದೇ ಒಂದು ಎಸೆತ ಕಾಣದೇ ರದ್ದಾಗಿದ್ದರಿಂದ ಸರಣಿ 1-1 ಅಂತರದಿಂದ ಡ್ರಾಗೊಂಡಿತ್ತು. ಅಂತೆಯೇ ಇತ್ತೀಚಿನ 3-0 ವೈಟ್ ವಾಷ್ ಸೇರಿದಂತೆ ಶ್ರೀಲಂಕಾ ವಿರುದ್ಧ ಎರಡು ಸರಣಿ ಜಯ ದಾಖಲಿಸಿದ್ದರೆ, ವೆಸ್ಟ್ ಇಂಡೀಸ್ ವಿರುದ್ಧವೂ ಎರಡು ಬಾರಿ ಸರಣಿ ಜಯದ ರುಚಿ ಕಂಡಿದೆ. ಜತೆಗೆ ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧ ತಲಾ ಒಂದು ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ 2-2 ಅಂತರದಿಂದ ಡ್ರಾದಲ್ಲಿ ಮುಕ್ತಾಯಗೊಂಡಿದ್ದು, ಸತತ ಒಂಬತ್ತು ಸರಣಿಗಳಲ್ಲಿ ಸೋಲಿಲ್ಲದ ಸರದಾರನಂತೆ ಮುಂದುವರಿದೆ. ಆಸ್ಟ್ರೇಲಿಯಾ ತಂಡದ ಎಂಟು ಸರಣಿಯ ಸೋಲಿಲ್ಲದ ಅಭಿಯಾನ 2006ರಲ್ಲಿ ಆರಂಭಗೊಂಡು 2010ರಲ್ಲಿ ಮುಕ್ತಾಯಗೊಂಡಿತ್ತು.
ಕೊಹ್ಲಿ, ರೋಹಿತ್ ಲಭ್ಯವಿರಲಿಲ್ಲ
ಭಾರತ ತಂಡದ ಸೋಲು ರಹಿತ ಅಭಿಯಾನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ನಾಯಕತ್ವದಲ್ಲಿ ನಡೆದಿದೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅವರಿಬ್ಬರೂ ತಂಡದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ರಿಷಭ್ ಪಂತ್‌ಗೆ ನೇತೃತ್ವ ವಹಿಸಲಾಗಿತ್ತು. ನವ ದೆಹಲಿ ಹಾಗೂ ಒಡಿಶಾದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಸೋತು ೨-೦ ಹಿನ್ನಡೆಗೆ ಒಳಗಾಗಿತ್ತು. ಆದರೆ, ರಾಜ್‌ಕೋಟ್ ಹಾಗೂ ವಿಶಾಖಪಟ್ಟಣಮ್‌ನಲ್ಲಿ ಗೆಲುವು ಸಾಧಿಸುವ ಮೂಲಕ ೨-೨ರ ಸಮಬಲಕ್ಕೆ ಬಂದು ಕೊನೇ ಪಂದ್ಯ ಕೌತುಕ ಸೃಷ್ಟಿಸಿತ್ತು. ಆದರೆ, ಮಳೆಯಿಂದಾಗಿ ಸರಣಿ ಗೆಲ್ಲುವ ಅವಕಾಶ ತಪ್ಪಿತು.
ಇದನ್ನೂ ಓದಿ| ದಕ್ಷಿಣ ಆಫ್ರಿಕಾ ಸರಣಿ ಬಳಿಕ ಟಿ20ಯಿಂದ ಯಾರು ಔಟ್?
2016ರಿಂದ 18ರ ಅವಧಿಯಲ್ಲಿ ಭಾರತ ತಂಡ ತವರಿನಲ್ಲಿ ಸತತ 6 ಸರಣಿ ಗೆದ್ದಿತ್ತು. ಆದರೆ, 2019ರಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು 2-0 ಅಂತರದಿಂದ ಕಳೆದುಕೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿ ಎಡವಿತ್ತು. ಮುಂದಿನ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಮಾಡಲಿದೆ. ಈ ಸರಣಿಯಲ್ಲಿ ಏನಾದರೂ ಭಾರತ ಸೋಲು ತಪ್ಪಿಸಿಕೊಂಡರೆ ತವರಿನಲ್ಲಿ ಸೋಲಿಲ್ಲದ ೧೦ ಸರಣಿಯಲ್ಲಿ ಪಾಲ್ಗೊಂಡ ಮೊದಲ ತಂಡ ಎಂಬ ವಿಶ್ವ ದಾಖಲೆ ಸೃಷ್ಟಿಸಲಿದೆ.
ಈ ನಡುವೆ ಭಾರತ ತಂಡ ವಿದೇಶದಲ್ಲೂ ಟಿ೨೦ ಸರಣಿಯಲ್ಲಿ ನಿರತವಾಗಿರಲಿದೆ. ಮೊದಲಿಗೆ ಐರ್ಲೆಂಡ್ ಆ ಬಳಿಕ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್‌ಗೆ ಎದುರಾಗಲಿದೆ. ಇದಾದ ಬಳಿಕ ಏಷ್ಯಾ ಕಪ್‌ನಲ್ಲೂ ಆಡಬೇಕಾಗಿದೆ.
ಇದನ್ನೂ ಓದಿ| Ind vs Sa T20 | ಮಳೆಯಿಂದಾಗಿ ಪಂದ್ಯ ರದ್ದು, 2-2 ಸಮಬಲದೊಂದಿಗೆ ಸರಣಿ ಅಂತ್ಯ