ಮುಂಬಯಿ: ಟೀಮ್ ಇಂಡಿಯಾದ ಇತ್ತೀಚಿನ ಪ್ರದರ್ಶನಗಳ ಹಿನ್ನೆಲೆಯಲ್ಲಿ ಏಕ ದಿನ ಮಾದರಿಯಲ್ಲಿ ಕಾಯಂ ನಾಯಕ ರೋಹಿತ್ ಶರ್ಮ (Rohit Sharma) ಹುದ್ದೆಗೆ ಕುತ್ತು ಬರಬಹುದು ಎಂಬ ವರದಿಗಳು ಸುಳ್ಳಾಗಿವೆ. ಭಾನುವಾರ ನಡೆದ ಬಿಸಿಸಿಐ ಪರಾಮರ್ಶೆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿಲ್ಲ ಹಾಗೂ ರೋಹಿತ್ ನಾಯಕತ್ವದ ಬಗ್ಗೆ ಸಂತಸ ವ್ಯಕ್ತಪಡಿಸಲಾಯಿತು ಎನ್ನಲಾಗಿದೆ.
ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರು ಈ ಸಭೆಗೆ ಹಾಜರಾಗಿದ್ದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಸಭೆಯನ್ನು ನಡೆಸಿದ್ದರು. ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಭಾರತ ತಂಡ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರುವ ಅವಕಾಶ ಹೊಂದಿದ್ದು, ಭಾರತದ ಆತಿಥ್ಯದಲ್ಲೇ ನಡೆಯುವ ಏಕ ದಿನ ವಿಶ್ವ ಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆಗಳೂ ಹೆಚ್ಚಿವೆ. ಇದರ ಕುರಿತು ಪರಾಮರ್ಶೆ ಸಭೆಯಲ್ಲಿ ಚರ್ಚೆಗಳು ನಡೆದವು.
ರೋಹಿತ್ ಶರ್ಮ ಅವರು ಟೆಸ್ಟ್ ಹಾಗೂ ಏಕ ದಿನ ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಅವರನ್ನು ನಾಯಕತ್ವದಿಂದ ಹೊರಕ್ಕಿಡುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿಲ್ಲ. ಅವರ ನಾಯಕತ್ವದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ತೃಪ್ತಿ ಇದ್ದಂತಿದೆ ಎಂಬುದಾಗಿ ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಆಯ್ಕೆ ಸಮಿತಿಯನ್ನು ಬಿಸಿಸಿಐ ರದ್ದು ಮಾಡಿರುವ ಹೊರತಾಗಿಯೂ ಚೇತನ್ ಶರ್ಮ ಅವರನ್ನು ಸಭೆ ಕರೆದಿರುವುದು ಅಚ್ಚರಿಯ ನಿರ್ಧಾರವಾಗಿದೆ. ಮುಂದಿನ ವಾರ ಹೊಸ ಆಯ್ಕೆ ಸಮಿತಿಯು ನೇಮಕಗೊಳ್ಳಲಿದ್ದು, ಚೇತನ್ ಅವರನ್ನೇ ಮುಂದುವರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ | Virat kohli | ಕೊಹ್ಲಿಯ ವೃತ್ತಿ ಜೀವನವನ್ನೇ ಹಾಳು ಮಾಡಲು ಯತ್ನಿಸಿದ್ದರೇ ಚೇತನ್ ಶರ್ಮ?