ಹೊಸದಿಲ್ಲಿ : ಟಿ20 ಮಾದರಿಯಿಂದ ನಿವೃತ್ತಿ ಪಡೆಯುವ ಯೋಚನೆ ಸದ್ಯಕ್ಕೆ ಇಲ್ಲ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಅವರು ಸೋಮವಾರ ಹೇಳಿದ್ದಾರೆ. ಈ ಮೂಲಕ ಹಿಟ್ಮ್ಯಾನ್ ಚುಟುಕು ಕ್ರಿಕೆಟ್ನಿಂದ ದೂರ ಸರಿಯುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರೋಹಿತ್ ಅವರಲ್ಲದೆ, ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ. ಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಅವರೆಲ್ಲರೂ ಚಟುಕು ಮಾದರಿಯ ಕ್ರಿಕೆಟ್ನಿಂದ ವಿಮುಕ್ತರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ಸಾಧ್ಯತೆಯನ್ನು ರೋಹಿತ್ ಅವರು ನಿರಾಕರಿಸಿದ್ದಾರೆ.
2024ರ ವಿಶ್ವ ಕಪ್ಗೆ ಯುವ ಆಟಗಾರರನ್ನು ಹೊಂದಿರುವ ತಂಡವನ್ನು ರಚಿಸುವುದು ಬಿಸಿಸಿಐ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರರನ್ನು ಬದಿಗೆ ಸರಿಸುವ ಸಾಧ್ಯತೆಗಳಿವೆ ಎಂಬ ವರದಿಗಳೂ ಹರಿದಾಡಿದ್ದವು. ಅದಕ್ಕೆ ಪೂರಕವಾಗಿ ಲಂಕಾ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್, ಶುಬ್ಮನ್ ಗಿಲ್ ಸೇರಿದಂತೆ ಹಲವು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಹೆಗಲೇರಿಸಿದ್ದರು. ಈ ಊಹಾಪೋಹಗಳಿಗೆ ರೋಹಿತ್ ಉತ್ತರ ಕೊಟ್ಟಿದ್ದಾರೆ.
ಸತತವಾಗಿ ಕ್ರಿಕೆಟ್ ಆಡುವುದು ಸಾಧ್ಯವಿಲ್ಲ. ಹೀಗಾಗಿ ಬ್ರೇಕ್ ತೆಗೆದುಕೊಳ್ಳುವುದು ಅನಿವಾರ್ಯ. ಮುಂದೆ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಯಿದೆ. ಅಲ್ಲಿ ನಾನು ಆಡುತ್ತೇನೆ. ಐಪಿಎಲ್ ಬಳಿಕ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ, ನಾನು ನಿವೃತ್ತಿ ಪಡೆಯುವ ನಿರ್ಧಾರ ಮಾಡಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.
ಏಕ ದಿನ ವಿಶ್ವ ಕಪ್ನಲ್ಲಿ ಆಡುವುದೇ ನಮ್ಮ ಗುರಿಯಾಗಿದೆ. ಅದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಆದರೆ, ಎಲ್ಲರಿಗೂ ಆ ತಂಡದಲ್ಲಿ ಅವಕಾಶ ಸಿಗದು ಎಂಬುದಾಗಿ ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ | IND VS SL | ಜಿಮ್ನಲ್ಲಿ ವರ್ಕೌಟ್ ಜತೆಗೆ ನೃತ್ಯ ಮಾಡಿದ ರೋಹಿತ್ ಶರ್ಮಾ; ವಿಡಿಯೊ ವೈರಲ್