ಮುಂಬಯಿ: ಭಾರತ ಕ್ರಿಕೆಟ್ ತಂಡದ ಕೋಚ್(Team India Coach) ಹುದ್ದೆಗಾಗಿ ಬುಧವಾರ ಅಂತಿಮ ಸುತ್ತಿನ ಸಂದರ್ಶನ ನಡೆದಿತ್ತು. ಮಾಜಿ ಆರಂಭಕಾರ, ತಮಿಳುನಾಡಿನ ಡಬ್ಲ್ಯು.ವಿ. ರಾಮನ್(WV Raman) ಮತ್ತು ಗಂಭೀರ್ ಅವರು ಈ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಮೂಲಗಳ ಪ್ರಕಾರ ಗೌತಮ್ ಗಂಭೀರ್(Gautam Gambhir) ಅವರ ಹೆಸರು ಅಂತಿಮವಾಗಿದ್ದು, ಇಂದು(ಗುರುವಾರ) ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ. ವಿ. ರಾಮನ್ ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.
ಬುಧವಾರ ನಡೆದ ಸಂದರ್ಶನದಲ್ಲಿ ಗಂಭೀರ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಾಗಿತ್ತು. ಇದರಲ್ಲಿ ಮುಖ್ಯವಾದುದೆಂದರೆ, ಹಿರಿಯ ಆಟಗಾರರ ನಿವೃತ್ತಿಯ ಬಳಿಕ ತಂಡವನ್ನು ಹೇಗೆ ನಿಭಾಯಿಸುತ್ತೀರಿ?, ಆಟಗಾರರ ಫಿಟ್‌ನೆಸ್ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ದ್ರಾವಿಡ್(Rahul Dravid) ಅವರು ಟಿ20 ವಿಶ್ವಕಪ್ ಬಳಿಕ ಕೋಚ್(India Head Coach) ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಬಳಿಕ ನೂತನ ಕೋಚ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೂತನ ಕೋಚ್ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯೂ ಈ ಕೋಚ್ಗೆ ಸಿಗಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಕೋಚ್ ಆಗುವ ಉದ್ದೇಶದಿಂದಲೇ ಗಂಭೀರ್ ಈ ನಿರ್ಧಾರ ಕೈಗೊಂಡದ್ದು ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಸದ್ಯ ಎಲ್ಲ ಅನುಮಾನಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ IND vs AFG: ಇಂದಿನ ಸೂಪರ್-8 ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ
ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ಗಂಭೀರ್ ಅವರು ಒಂದು ಷರತ್ತು ಹಾಕಿದ್ದರು. ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಗಂಭೀರ್ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧರಿರುವುದಾಗಿ ಹೇಳಿದ್ದರು. ಕೋಚ್ ಹುದ್ದೆಗಾಗಿ ಎಷ್ಟು ಅರ್ಜಿಗಳು ಬಂದಿದೆ ಎಂಬುದರ ಬಗ್ಗೆ ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ ಆದರೆ ಗಂಭೀರ್ ಕೋಚ್ ಆಗುವುದು ಖಚಿತ ಎನ್ನಲಾಗಿದೆ.
ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್
ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್ ಕಂಡ ಬೆಸ್ಟ್ ಫೀಲ್ಡರ್ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್ ಕೋಚ್(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.
ಗಂಭೀರ್ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್ನಲ್ಲಿ ಇದೀಗ ಟೀಮ್ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್ ಅವರ ಅಭಯಹಸ್ತದಿಂದ ರೋಡ್ಸ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ