Site icon Vistara News

Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

Team India Coach

Team India Coach: Jonty Rhodes Being Considered to be India's New Fielding Coach

ಮುಂಬಯಿ: ಗೌತಮ್​ ಗಂಭೀರ್​ ಅವರು ಟೀಮ್​ ಇಂಡಿಯಾದ(Team India Coach) ಮುಂದಿನ ಕೋಚ್​ ಆಗಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್​ ಟೂರ್ನಿ ಮುಕ್ತಾಯಗೊಂಡ ತಕ್ಷಣ ನೂತನ ಕೋಚ್​ಗಳ ಹೆಸರು ಪ್ರಕಟಗೊಳ್ಳಲಿದೆ. 54 ವರ್ಷದ ಜಾಂಟಿ ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಫೀಲ್ಡಿಂಗ್​ ಕೋಚ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಂಜಾಜ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡದ ಪರ ಫೀಲ್ಡಿಂಗ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.​

ಇದನ್ನೂ ಓದಿ Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

ಭಾರತವೆಂದರೆ ಜಾಂಟಿ ರೋಡ್ಸ್​ಗೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ಅವರು ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ. ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ಅವರು ಮುಂಬೈನಲ್ಲಿ ಸರ್ಫಿಂಗ್​ ಮತ್ತು ಕೆಲವು ತೀರ್ಥಕ್ಷೇತ್ರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ. ಈ ಬಾರಿಯ ಐಪಿಎಲ್​ ಟೂರ್ನಿಯ ವೇಳೆ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ರಾಮ ಮಂದಿರ ಉದ್ಘಾಟನೆಯ ವೇಳೆಯೂ ಅವರು ಶುಭ ಹಾರೈಸಿದ್ದರು. 2020ರಲ್ಲಿ ಹೃಷಿಕೇಶ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಹಬ್ಬಕ್ಕೆ ಆಗಮಿಸಿದ್ದ ವೇಳೆ ಜಾಂಟಿ ರೋಡ್ಸ್‌ ಗಂಗಾ ನದಿಗೂ ಭೇಟಿ ನೀಡಿದ್ದರು. ಮೊದಲೇ ಭಾರತ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಜಾಂಟಿ ರೋಡ್ಸ್‌ ಭಾರತೀಯರಿಗೆ ಅತ್ಯಂತ ಪವಿತ್ರವಾಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿ ಸಾರ್ಥಕತೆಯ ಖುಷಿ ಅನುಭವಿಸಿದ್ದರು.

ಮೋದಿ ಅಭಿಮಾನಿ


ಜಾಂಟಿ ರೋಡ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ 15ನೇ ಬ್ರಿಕ್ಸ್‌ ಸಮ್ಮೇಳನದಲ್ಲಿ ಮೋದಿ ಅವರು ದಕ್ಷಿಣ ಆಫ್ರಿಕಾಗೆ ಬಂದಿದ್ದ ವೇಳೆ ರೋಡ್ಸ್ ಅವರು ‘ನಮಸ್ಕಾರ ಮೋದಿಜಿ’ ಎಂದು ಸ್ವಾಗತ ಕೋರಿದ್ದರು. “ಭಾರತಕ್ಕೆ ನನ್ನ ಕುಟುಂಬ ಹಲವು ಬಾರಿ ಭೇಟಿ ನೀಡಿದೆ. ಭಾರತವೆಂದರೆ ಭಾವನಾತ್ಮಕ ಸಂಬಂದವೂ ನನಗಿದೆ. ಅದ್ಭುತ ದೇಶ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ನೀವೊಬ್ಬರು ರೋಲ್ ಮಾಡೆಲ್” ಎಂದು ಬರೆದುಕೊಂಡಿದ್ದರು.

Exit mobile version