ಬೆಂಗಳೂರು: ಭಾರತ ತಂಡದ ಹೆಡ್ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್(Rahul Dravid) ಅವರು ಏಕದಿನ ವಿಶ್ವ ಕಪ್(ICC World Cup) ಬಳಿಕ ಕೋಚಿಂಗ್ ಹುದ್ದೆಯಲ್ಲಿ(Team India Coach) ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ವಿಶ್ವ ಕಪ್ ಬಳಿಕ ದ್ರಾವಿಡ್ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದಾದ ಬಳಿಕ ಅವರು ಗುತ್ತಿಗೆ ಅವಧಿ ಮುಂದುವರಿಯುವ ಸಾಧ‍್ಯತೆ ಕಡಿಮೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಕ್ಕಿರಲ್ಲಿ. ಸದ್ಯ ಅವರ ಅವರ ಕೋಚಿಂಗ್ನಲ್ಲಿ ಏಷ್ಯಾಕಪ್ ಮಾತ್ರ ಒಲಿದಿದೆ.
ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ನಲ್ಲಿ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. ಈಗಾಗಲೇ ಆಡಿದ 5 ಪಂದ್ಯಗಳಲ್ಲಿ 5 ಪಂದಗಳನ್ನೂ ಗೆದ್ದು ಅಂಕಪಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಇನ್ನೊಂದು ಪಂದ್ಯ ಗೆದ್ದರೆ ಸೆಮಿ ಫೈನಲ್ ಪ್ರವೇಶ ಪಡೆಯಲಿದೆ. ಭಾರತ ತಂಡದ ಪ್ರದರ್ಶನ ನೋಡುವಾಗ ಈ ಬಾರಿ ಕಪ್ ಗೆಲ್ಲುವ ಎಲ್ಲ ಸಾಧ್ಯತೆ ಇದೆ.
ಇದನ್ನೂ ಓದಿ VVS Laxman : ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್?
ವಿಶ್ವಕಪ್ ಗೆದ್ದರೂ ಕೋಚಿಂಗ್ ಸಡೆಸಲ್ಲ
ಭಾರತ ತಂಡ ವಿಶ್ವಕಪ್ ಗೆದ್ದರೂ ರಾಹುಲ್ ದ್ರಾವಿಡ್ ಅವರು ತಮ್ಮ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯುವ ಆಸಕ್ತಿ ತೋರಿಲ್ಲ ಎಂದು ತಿಳಿದುಬಂದಿದೆ. ನಿಕಟ ಮೂಲಗಳ ಪ್ರಕಾರ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದೊಂದಿಗೆ ಸತತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದೇ ಬೇಸರಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರು 2021ರಲ್ಲಿ ಒಪ್ಪಿಸಿದ್ದ ಕಾರಣ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಇದೀಗ ಅವರಿಗೆ ಈ ಕರ್ತವ್ಯ ಸಾಕು ಎನಿಸಿದ್ದು ಮುಂದುವರಿಯುವ ಸಾಧ್ಯತೆಗಳು ಬಹುತೇಕ ಇಲ್ಲ ಎನ್ನಲಾಗಿದೆ.
ಲಕ್ಷ್ಮಣ್ ಮುಂದಿನ ಕೋಚ್?
ದ್ರಾವಿಡ್ ಅವರ ಬಳಿಕ ಭಾರತ ತಂಡದ ಕೋಚ್ ಹುದ್ದೆಗೆ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಬಲವಾಗಿ ಕೇಳಿಬಂದಿದೆ. ವಿಶ್ವಕಪ್ ಮುಗಿದ ತಕ್ಷಣ ಭಾರತ ಆಸ್ಟ್ರೇಲಿಯಾ ವಿರುದ್ಧ ಟಿ 20 ಸರಣಿಯನ್ನು ಆಡಲಿದೆ. ಈ ತಂಡಕ್ಕೆ ಲಕ್ಷ್ಮಣ್ ಅವರು ಕೋಚ್ ಆಗಿರಲಿದ್ದಾರೆ. ಮುಂದಿನ ಕೋಚ್ ದೃಷ್ಟಿಯಲ್ಲಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಲಕ್ಷ್ಮಣ್ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಸರಣಿಯಲ್ಲಿ ಕೋಚಿಂಗ್ ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಅಲ್ಲದೆ ಇವರ ಕೋಚಿಂಗ್ನಲ್ಲೇ ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತ ಐತಿಹಾಸಿಕ ಚಿನ್ನ ಗೆದ್ದಿತ್ತು.
ಆಸಕ್ತಿ ತೋರದ ಆಶೀಸ್ ನೆಹ್ರಾ
ದ್ರಾವಿಡ್ ಅವರ ಕೋಚಿಂಗ್ ಅವದಿ ಮುಗಿದ ಬಳಿಕ ಮಾಜಿ ಆಟಗಾರ ಮತ್ತು ಪ್ರಸ್ತತ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿರುವ ಆಶೀಸ್ ನೆಹ್ರಾ(Ashish Nehra) ಅವರು ಟೀಮ್ ಇಂಡಿಯಾದ ಕೋಚ್ ಆಗಬೇಕೆಂದು ಹಲವರು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ನೆಹ್ರಾ ಮಾರ್ಗದರ್ಶನದಲ್ಲಿ ಗುಜರಾತ್ ತಂಡ ಚೊಚ್ಚಲ ಬಾರಿಗೆ ಕಪ್ ಗೆದ್ದು ಸಂಭ್ರಮಿಸಿತ್ತು. ಅಲ್ಲದೆ ಈ ಬಾರಿ ಫೈನಲ್ಗೂ ಪ್ರವೇಶ ಪಡೆದಿತ್ತು. ಪಂದ್ಯ ಆರಂಭಗೊಂಡು ಮುಗಿಯುವ ತನ ಕೂತಲ್ಲಿ ಕೂರದೆ ಆಟಗಾರರಿಗೆ ಬೆಂಬಲಿಸುವ ಅವರ ಗುಣ ಎಲ್ಲರಿಗೂ ಮೆಚ್ಚುಗೆಯಾಗಿದೆ. ಇದೇ ಕಾರಣಕ್ಕೆ ಅವರು ಭಾರತ ತಂಡದ ಕೋಚ್ಗೆ ಸೂಕ್ತ ಎಂದು ಹೇಳಲಾಗುತ್ತಿದೆ. ಆದರೆ ನೆಹ್ರಾ ಅವರು ಸದ್ಯಕ್ಕೆ ನಾನು ಆಸಕ್ತಿ ಹೊಂದಿಲ್ಲ ಎಂದು ಹೇಳಿರುವದಾಗಿ ಪಿಟಿಐ ವರದಿ ಮಾಡಿತ್ತು.