ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಆಟದ ದಿನಗಳಿಂದಲೂ ಅತ್ಯಂತ ನಿರ್ಗವಿ ಆಟಗಾರ. ಒಣ ಜಂಭ. ಆಹಂಕಾರ, ದ್ವೇಷ- ಅಸೂಯೆಗಳು ಅವರ ಸನಿಹವೂ ಸುಳಿಯುವುದಿಲ್ಲ. ಇದೇ ವ್ಯಕ್ತಿತ್ವ ಅವರನ್ನು ಸಾಧನೆಯ ಉತ್ತುಂಗಕ್ಕೇರಿಸಿದೆ. ಅವರ ಕೋಚಿಂಗ್ ಹುದ್ದೆಯೂ ವಿಸ್ತರಣೆಗೊಂಡಿದೆ. ಇಷ್ಟೆಲ್ಲ ಜನಪ್ರಿಯತೆ ಹೊಂದಿರುವ ಆಟಗಾರ ಹಾಗೂ ಕೋಚ್ ಮಣ್ಣಿನ ನೆಲದ ಮೇಲೆ ಕುಳಿತು ಕ್ರಿಕೆಟ್ ನೋಡುವುದೆಂದರೆ ನಂಬಲು ಸಾಧ್ಯವೇ. ಆದರೆ ನಂಬಲೇ ಬೇಕು. ಯಾಕೆಂದರೆ ಅವರು ಮೈಸೂರಿನಲ್ಲಿ ಕ್ರೀಡಾಂಗಣದ ಮಣ್ಣಿನ ಮೆಟ್ಟಿಲ ಮೇಲೆ ಕುಳಿತು ಪಂದ್ಯ ನೋಡುತ್ತಿರುವ ಚಿತ್ರಗಳು ವೈರಲ್ ಆಗಿದೆ.
ಅಂದ ಹಾಗೆ ದ್ರಾವಿಡ್ ವೀಕ್ಷಿಸಿದ್ದು ತಮ್ಮ ಪುತ್ರ ಸುಮಿತ್ ದ್ರಾವಿಡ್ ಆಟವನ್ನು. ಈ ಮೂಲಕ ರಾಹುಲ್ ತಾವು ಕೋಚ್ಗಿಂತಲೂ ಅಪ್ಪನೆಂಬ ಜವಾಬ್ದಾರಿಯೇ ದೊಡ್ಡದು ಎಂಬುದನ್ನು ಸಾಬೀತುಮಾಡಿದ್ದಾರೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಮೈಸೂರು ವಲಯ ಆಯೋಜಿಸಿದ್ದ 19 ವರ್ಷದೊಳಗಿನವರ ಕೂಚ್ ಬೆಹಾರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಮಾನಸಗಂಗೋತ್ರಿಯ ಎಸ್ ಡಿಎನ್ ಆರ್ (ಶ್ರೀಕಂಠದತ್ತ ನರಸಿಂಹರಾಜ) ಒಡೆಯರ್ ಕ್ರೀಡಾಂಗಣದಲ್ಲಿ ಡಿಸೆಂಬರ್ 1ರಂದು ಆರಂಭಗೊಂಡಿದೆ. ಈ ಪಂದ್ಯವನ್ನು ವೀಕ್ಷಿಸಲು ದ್ರಾವಿಡ್ ಅಲ್ಲಿಗೆ ಬಂದಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಉತ್ತರಾಖಂಡ್ 38 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು. ಆತಿಥೇಯ ಕರ್ನಾಟಕ ಪರ ಮೈಸೂರಿನ ಇಶಾನ್ 3 ವಿಕೆಟ್ ಪಡೆದರೆ, ಸಮರ್ಥ್ 2 ವಿಕೆಟ್ ಪಡೆದರು. ಬಿಸಿಸಿಐ ರಾಷ್ಟ್ರೀಯ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್ ಫೈನಲ್ನಲ್ಲಿ ಆತಿಥೇಯ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ಡಾ.ವಿಜೇತಾ ಅವರು ಮೈಸೂರಿನಲ್ಲಿ ನಡೆದ 19 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ತಮ್ಮ ಮಗನ ಆಟವನ್ನು ವೀಕ್ಷಿಸುತ್ತಿದ್ದಾರೆ. ಈ ವೇಳೆ ರಾಹುಲ್ ದ್ರಾವಿಡ್ ಯಾರಗೊಂದಿಗೆ ಮಾತನಾಡಲೂ ಒಪ್ಪಲಿಲ್ಲ. ತಮ್ಮ ಮಗುವಿನ ಆಟವನ್ನು ವೀಕ್ಷಿಸಲು ಕ್ರಿಕೆಟಿಗನ ಪೋಷಕನಾಗಿ ಇಲ್ಲಿಗೆ ಬಂದಿದ್ದೇನೆ. ಎಂದಷ್ಟೇ ಹೇಳಿದ್ದಾರೆ. ಸಮಿತ್ ದ್ರಾವಿಡ್ ಉತ್ತಮ ಆಲ್ರೌಂಡರ್, ಅವರು ಪಂದ್ಯದಲ್ಲಿ 5 ಓವರ್ ಬೌಲಿಂಗ್ ಮಾಡಿ 11 ರನ್ ಬಾರಿಸಿದ್ದರು.
ಭಾರತ ತಂಡದ ಕೋಚ್ ಆಗಿ ಮುಂದುವರಿಕೆ
ರಾಹುಲ್ ದ್ರಾವಿಡ್ (Rahul Dravid ) ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ. ಅವರ ಸೇರಿದಂತೆ ಇತರ ಕೋಚಿಂಗ್ ಸಿಬ್ಬಂದಿಯ ಒಪ್ಪಂದವನ್ನು ವಿಸ್ತರಿಸಲು ಬಿಸಿಸಿಐ ನಿರ್ಧರಿಸಿದೆ. ವಿಸ್ತರಣೆಯ ಅವಧಿ ಇನ್ನೂ ತಿಳಿದಿಲ್ಲ. ಆದರೆ, ಮುಂದಿನ ಜೂನ್ನಲ್ಲಿ ನಡೆಯಲಿರುವ 2024 ಟಿ20 ವಿಶ್ವಕಪ್ ವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ದ್ರಾವಿಡ್ ತಮ್ಮ ಹುದ್ದೆಯಲ್ಲಿ ಮುಂದುವರಿಯಲಾರರು ಎಂಬ ಊಹಾಪೋಹಗಳ ನಡುವೆ ಬಿಸಿಸಿಐ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: Team India: ಭಾರತ ಟಿ20 ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರು ಇವರು
ದ್ರಾವಿಡ್ 2021 ರ ನವೆಂಬರ್ನಲ್ಲಿ ಎರಡು ವರ್ಷಗಳ ಅವಧಿಗೆ ಭಾರತ ತಂಡದ ಹೆಡ್ ಕೋಚ್ ಆಗಿದ್ದರು. ಇದು ಈ ತಿಂಗಳ ಆರಂಭದಲ್ಲಿ ಅಹಮದಾಬಾದ್ನಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ನಲ್ಲಿ ಕೊನೆಯಲ್ಲಿ ಕೊನೆಗೊಂಡಿತ್ತು. ಅಲ್ಲಿಂದ ಬಿಸಿಸಿಐ ಹೊಸ ಕೋಚ್ ಆಯ್ಕೆಗೆ ಯೋಜನೆ ರೂಪಿಸಿಕೊಂಡಿತ್ತು. ಆದರೆ, ದ್ರಾವಿಡ್ ಅವರನ್ನೇ ಮುಂದುವರಿಸುವುದು ಸೂಕ್ತ ಎಂಬ ಪಂಡಿತರ ಅಭಿಪ್ರಾಯದ ಪ್ರಕಾರ ಅವರನ್ನೇ ಮತ್ತೆ ನೇಮಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ದ್ರಾವಿಡ್ ಅವರು ಸ್ಥಾಪಿಸಿದ ರಚನೆಯಲ್ಲಿ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಬಯಸಿದೆ ಎಂಬುದಾಗಿ ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಡಿಸೆಂಬರ್ 10 ರಿಂದ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳೊಂದಿಗೆ ಪ್ರಾರಂಭವಾಗುವ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವು ದ್ರಾವಿಡ್ ಅವರ ವಿಸ್ತರಣೆ ಅವಧಿಯ ಮೊದಲ ಕಾರ್ಯವಾಗಿದೆ. ನಂತರ ಸೆಂಚೂರಿಯನ್ (ಡಿಸೆಂಬರ್ 26 ರಿಂದ) ಮತ್ತು ಕೇಪ್ ಟೌನ್ (ಜನವರಿ 3 ರಿಂದ) ನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಜೂನ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ಗೆ ಮೊದಲು ಭಾರತವು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಐದು ಟೆಸ್ಟ್ ಸರಣಿಯನ್ನು ಆಡಲಿದೆ.