ಮುಂಬಯಿ: ಬುಧವಾರ ನಡೆದಿದ್ದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ 70 ರನ್ಗಳ ಅಂತರದಿಂದ ಗೆದ್ದು ಫೈನಲ್(icc world cup 2023 final) ಪ್ರವೇಶಿಸಿತ್ತು. ಫೈನಲ್ಗೇರಿದ ಖಷಿಯನ್ನು ಎಲ್ಲ ಆಟಗಾರು ಸೇರಿ ಡ್ರೆಸ್ಸಿಂಗ್ ರೋಮ್ನಲ್ಲಿ(team india dressing room) ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಇಂಡಿಯನ್ ಕ್ರಿಕೆಟ್ ಟೀಮ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಸಿಸಿಐ ಈ ವಿಡಿಯೊವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಪಂದ್ಯದ ಬಳಿಕ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ ಕ್ಷಣದಿಂದ ಹಿಡಿದು ಡ್ರೆಸ್ಸಿಂಗ್ ವರೆಗಿನ ಎಲ್ಲ ಸ್ಮರಣೀಯ ಕ್ಷಣವನ್ನು ಅನಾವರಣ ಮಾಡಲಾಗಿದೆ.
ಮೊಹಮ್ಮದ್ ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ರಾಹುಲ್ ಸೇರಿ ಹಲವು ಆಟಗಾರರು ಪಂದ್ಯದ ಬಳಿಕ ಪ್ರೇಕ್ಷಕರಿಗೆ ಅಭಿನಂದಿಸುವುದು ಹೀಗೆ ಹಲವು ಕ್ಷಣವನ್ನು ಕಾಣಬಹುದು. ಕೊಹ್ಲಿ ಮತ್ತು ರೋಹಿತ್ ನಡುವೆ ಮನಸ್ತಾಪ ಇದೆ ಎಂದು ಈ ಹಿಂದೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ, ಇಬ್ಬರ ನಡುವಿನ ಸ್ನೇಹ ಹೇಗಿದೆ ಎಂಬುದಕ್ಕೆ ಈ ಬಾರಿಯ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳು ಉತ್ತರ ನೀಡಿದ್ದವು. ಇಬ್ಬರು ಮೈದಾನದಲ್ಲಿ ಸಂಭ್ರಮಿಸಿದ ಕ್ಷಣವನ್ನು ಕಂಡು ಇವರಿಬ್ಬರ ಮಧ್ಯೆ ಸರಿಯಿಲ್ಲ ಎಂದವರೂ ಕೂಡ ತಮ್ಮ ಮಾತನ್ನು ಹಿಂಪಡೆದಿದ್ದರು. ಸೆಮಿಫೈನಲ್ ವಿಜಯೋತ್ಸವದ ಬಳಿಕ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಆಟಗಾರರನ್ನು ಪ್ರಶಂಸಿಸಿದರು. ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೆಲ್ಲವೂ ಈ ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ World Cup Final: ಭಾರತ-ಆಸೀಸ್ ಫೈನಲ್ ಪಂದ್ಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಜರ್!
ಪಂದ್ಯ ಗೆದ್ದ ಭಾರತ
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 397 ರನ್ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 48.5 ಓವರ್ಗಳ ಮುಕ್ತಾಯಗೊಂಡಾಗ 327 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಅಂದ ಹಾಗೆ ಭಾರತ ತಂಡ ಹಾಲಿ ವಿಶ್ವ ಕಪ್ನಲ್ಲಿ ಯಾವುದೇ ತಂಡಕ್ಕೆ 50 ಓವರ್ಗಳನ್ನು ಪೂರ್ತಿಯಾಗಿ ಆಡಲು ಬಿಡಲಿಲ್ಲ. ಇದು ಕೂಡ ಭಾರತ ತಂಡದ ಪಾಲಿಗೆ ದಾಖಲೆಯಾಗಿದೆ.
ದೊಡ್ಡ ಮೊತ್ತವನ್ನು ಪೇರಿಸಲು ಹೊರಟ ನ್ಯೂಜಿಲ್ಯಾಂಡ್ ತಂಡಕ್ಕೆ ನಿಜವಾಗಿಯೂ ಕಾಡಿದ್ದು ಮೊಹಮ್ಮದ್ ಶಮಿ. 9.5 ಓವರ್ಗಳನ್ನು ಎಸೆದ ಶಮಿ 57 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿಗೆ ಕಾರಣರಾದರು. ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ 134 ರನ್ ಬಾರಿಸಿ ಮಿಂಚಿದರು. ಕೇನ್ ವಿಲಿಯಮ್ಸನ್ 69 ರನ್ ಬಾರಿಸಿದರು. ಇವರಿಬ್ಬರೂ 181 ರನ್ಗಳ ಜತೆಯಾಟವಾಡಿದರು. ಈ ವೇಳೆ ಭಾರತಕ್ಕೆ ಆತಂಕ ಎದುರಾಯಿತು. ಆದರೆ, ಶಮಿ ಅವರಿಬ್ಬರನ್ನೂ ಔಟ್ ಮಾಡುವ ಮೂಲಕ ಭಾರತಕ್ಕೆ ನೆಮ್ಮದಿ ತಂದರು. ನ್ಯೂಜಿಲ್ಯಾಂಡ್ ತಂಡದ ಗ್ಲೆನ್ ಫಿಲಿಫ್ಸ್ 41 ರನ್ ಬಾರಿಸಿದರು. ಉಳಿದವರಿಗೆ ದೊಡ್ಡ ಮೊತ್ತಕ್ಕೆ ಸವಾಲಾಗಲು ಸಾಧ್ಯವಾಗಲಿಲ್ಲ.
ಭಾನುವಾರ ಫೈನಲ್ ಪಂದ್ಯ
ಏಕದಿನ ಕ್ರಿಕೆಟ್ ವಿಶ್ವಕಪ್ನ ಮಹಾ ಸಮರ ನ.19ಕ್ಕೆ ಕೊನೆಗೊಳ್ಳಲಿದೆ. ಫೈನಲ್(World Cup Final) ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ವಿಶ್ವದ ಅತಿ ದೊಡ್ಡ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಭಾರತೀಯ ಆಟಗಾರರು ಅಹಮದಾಬಾದ್ಗೆ ತಲುಪಿದ್ದಾರೆ.