Site icon Vistara News

Team India Cricket: ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ ಅಡಿಡಾಸ್ ಲೋಗೊ; ಕಾರಣ ಏನು?

new jersey

#image_title

ಮುಂಬಯಿ: ಇನ್ನು ಮುಂದೆ ಟೀಮ್​ ಇಂಡಿಯಾದ ಕ್ರಿಕೆಟ್(Team India Cricket)​ ಜೆರ್ಸಿಯಲ್ಲಿ ಅಡಿಡಾಸ್(Adidas )​ ಸಂಸ್ಥೆಯ ಲೋಗೊ ಕಾಣಿಸಿಕೊಳ್ಳಲಿದೆ. ಇದಕ್ಕೆ ಕಾರಣ ನೂತನ ಕಿಟ್​ ಪ್ರಾಯೋ​ಜ​ಕ​ತ್ವರಾಗಿ ಬಿಸಿಸಿಐ (BCCI) ಜತೆ ಜರ್ಮನ್ ಕ್ರೀಡಾ ಸಾಮಗ್ರಿಗಳ ಕಂಪನಿ ಅಡಿಡಾಸ್ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಸೋಮವಾರ ಟ್ವೀಟ್​​ ಮಾಡುವ ಮೂಲಕ ಪ್ರಕಟಿಸಿದ್ದಾರೆ.

ಬಹು​ಕೋಟಿಯ ಈ ಒಪ್ಪಂದದ ಪ್ರಕಾರ ಅಡಿಡಾಸ್​ ಕಂಪನಿ 5 ವರ್ಷಕ್ಕೆ ಬಿಸಿಸಿಐಗೆ 350 ಕೋಟಿ ರೂ. ನೀಡಲಿದೆ ಎಂದು ತಿಳಿದುಬಂದಿದೆ. ಅದರಂತೆ ಮುಂದಿನ ಐದು ವರ್ಷಗಳ ಕಾಲ ಟೀಮ್ ಇಂಡಿಯಾ (Team India) ಆಟಗಾರರು ತೊಡುವ ಜೆರ್ಸಿಯ ಮೇಲೆ ಅಡಿಡಾಸ್ ಕಂಪನಿಯ ಲೋಗೋ ಇರಲಿದೆ.

“ಕಿಟ್ ಪ್ರಾಯೋಜಕರಾಗಿ ಅಡಿಡಾಸ್ ಜತೆಗೆ ಬಿಸಿಸಿಐ ಪಾಲುದಾರಿಕೆಯನ್ನು ಘೋಷಿಸಲು ಸಂತಸವಾಗುತ್ತಿದೆ. ಅತ್ಯಂತ ಪ್ರಸಿದ್ಧ ಕ್ರೀಡಾ ಉಡುಪುಗಳನ್ನು ಹೊಂದಿರುವ ಅಡಿಡಾಸ್ ಜತೆ ಪಾಲುದಾರರಾಗಲು ಉತ್ಸುಕರಾಗಿದ್ದೇವೆ” ಎಂದು ಜಯ್ ಶಾ ಟ್ವೀಟ್ ಮಾಡುವ ಮೂಲಕ ಅಡಿಡಾಸ್ ಜತೆಗಿನ ಒಪ್ಪಂದದ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ BCCI: ದೇಶಿ ಕ್ರಿಕೆ​ಟ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಕಳೆದ ವರ್ಷ ಎಂಪಿಎಲ್ ಕಂಪನಿಯು ಕೊರೊನಾ ನಷ್ಟದಿಂದ ಬಿಸಿಸಿಐ ಜತೆಗಿನ ಒಪ್ಪಂದವನ್ನು ಮಧ್ಯದಲ್ಲಿ ಮುರಿದುಕೊಂಡಿತ್ತು. ಇದರ ನಂತರ ಕಿಲ್ಲರ್ ಜೀನ್ಸ್ ಕಂಪನಿಯು ಅಲ್ಪಾವಧಿಗೆ ಭಾರತ ತಂಡದ ಜೆರ್ಸಿಯ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಆದರೆ ಈಗ ಸಂಪೂರ್ಣ 5 ವರ್ಷಗಳ ಮಟ್ಟಿಗೆ ಅಡಿಡಾಸ್​ ಸಂಸ್ಥೆ ಭಾರತ ತಂಡ ಕಿಟ್​ ಪ್ರಯೋಜಕತ್ವದ ಅಧಿಕಾರ ಪಡೆದಿದೆ. ಈ ಹಿಂದೆ ನೈಕ್ ಕಂಪೆನಿಯೂ ಬರೋಬ್ಬರಿ 14 ವರ್ಷಗಳ ಕಾಲ ಭಾರತ ಕ್ರಿಕೆಟ್​ ತಂಡದ ಕಿಟ್​ ಪ್ರಾಯೋಜಕತ್ವವನ್ನು ವಹಿಸಿತ್ತು. 2020ರಲ್ಲಿ ಈ ಒಪ್ಪಂದದಿಂದ ಕಂಪೆನಿ ಹಿಂದೆ ಸರಿದಿತ್ತು. ಇದಾದ ಬಳಿಕ ಭಾರತಕ್ಕೆ ಸರಿಯಾದ ಕಿಟ್​ ಪ್ರಾಯೋಜಕರು ಸಿಕ್ಕಿರಲಿಲ್ಲ. ಸದ್ಯ ಈಗ ಈ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ.

Exit mobile version